ಹಾಸನ: ಕೊರೊನಾದಿಂದ ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸುಮಾರು 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಸರ್ಕಾರ ಹೇಳಿದ್ದೆಲ್ಲವನ್ನೂ ನಮ್ಮ ರೈತರು ಅನುಸರಿಸಿದ್ದಾರೆ. ಆದರೆ ಅವರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದೆ ಇರುವ ಕಾರಣ ರೈತರ ಮನೆ ಹಾಳಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಇದಕ್ಕೆ ಪರಿಹಾರ ನೀಡುವ ಮೂಲಕ ರೈತರ ಹಿತ ಕಾಯಬೇಕು ಎಂದು ಮಾಜಿ ಸಚಿವ ಹೆಚ್. ಡಿ ರೇವಣ್ಣ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಷ್ಟವಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಗೊತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ಮಾಡುವ ಕೆಲಸವನ್ನು ನಾನೇ ಮಾಡಿದ್ದು ನಷ್ಟದ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದರು. ಜಿಲ್ಲೆಯಲ್ಲಿ 11,718 ಎಕರೆ ತರಕಾರಿ, 2400 ಹೆಕ್ಚೇರ್ ಕಬ್ಬು, 82 ಸಾವಿರ ಹೆಕ್ಚೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿದ್ದು ಇಂದು ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಸಾಲದ ಸುಳಿಗೆ ಸಿಲುಕಿ ನರಳಾಡುತ್ತಿದ್ದಾರೆ. ಜೊತೆಗೆ ಪ್ರತಿ ವರ್ಷ 2200- 2500 ರೂಪಾಯಿವರೆಗೆ ಇದ್ದ ಮುಸುಕಿನಜೋಳದ ಬೆಲೆ ಇಂದಿನ ಮಾರುಕಟ್ಟೆಯಲ್ಲಿ 1200 ರೂಪಾಯಿಯಷ್ಟು ಕಡಿಮೆಯಾಗಿದ್ದು ರೈತನ ಬದುಕು ಮೂರಾಬಟ್ಟೆಯಾಗಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಗಳು ಕೃಷಿ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ಕಿಡಿ ಕಾರಿದರು.
ಜಿಲ್ಲೆಯ ತೋಟಗಾರಿಕೆ ಕ್ಷೇತ್ರದಲ್ಲಿ 591 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಸುಮಾರು 20 ಕೋಟಿಗೂ ಹೆಚ್ಚು ಹಣ್ಣಿನ ಬೆಳೆ ನಷ್ಟವಾಗಿದೆ. ಕೃಷಿ ಮತ್ತು ತೋಟಗಾರಿಕೆ ಎರಡರಿಂದ ಜಿಲ್ಲೆಯಲ್ಲಿ 100 ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದ್ದು ಇದನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಕೂಡಲೇ ಪರಿಹಾರದ ರೂಪದಲ್ಲಿ ರೈತರಿಗೆ ನೀಡಬೇಕು ಎಂದು ಆಗ್ರಹ ಮಾಡಿದರು. ಇನ್ನೆರಡು ದಿನಗಳಲ್ಲಿ ಸಕ್ಕರೆ, ಇತರೆ ದಿನಬಳಕೆ ಪದಾರ್ಥಗಳು ಹಾಗೂ ತರಕಾರಿಗಳನ್ನು ನೇರವಾಗಿ ಕೃಷಿಕರಿಂದಲೇ ಖರೀದಿಸಿ ಪ್ರತಿ ಹಳ್ಳಿಗಳಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಕೂಡಾ ನಮ್ಮ ಕೆಎಂಎಫ್ ವತಿಯಿಂದ ಮಾಡಲಾಗುತ್ತದೆ ಎಂದರು.