ಹಾಸನ: ಪೊಲೀಸರು ತಮ್ಮ ಕೆಲಸ ನಿರ್ವಹಿಸುವುದನ್ನು ಬಿಟ್ಟು ಲೇಔಟ್ ಹಂಚಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರು ಸರ್ಕಾರಿ ಕೆಲಸ ಬಿಟ್ಟು ಬೂವನಹಳ್ಳಿಯಲ್ಲಿ ಲೇಔಟ್ ಮಾಡಿಕೊಂಡು ಹಂಚುವುದಕ್ಕೆ ಓಡಾಡುತ್ತಿದ್ದಾರೆ. ರಾಜ್ಯದ ಗೃಹ ಸಚಿವರೇ ನಿಮ್ಮ ಅಧಿಕಾರಿಗಳನ್ನ ಸೈಟ್ ಮಾರಿ ದುಡ್ಡು ಮಾಡಿಕೊಳ್ಳಲಿ ಎಂದು ಬಿಟ್ಟಿದ್ದೀರಾ? ಎಂದು ಪ್ರಶ್ನಿಸಿದರು. ಯಾರು ಟೌನ್ ಪ್ಲಾನಿಂಗ್ ಆಫೀಸರ್ ಇದ್ದಾರೋ ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ಮಿನಿಸ್ಟರ್ ಆಗಿದ್ರೆ ಅವನನ್ನು ಒದ್ದು ಒಳಗೆ ಹಾಕಿಸುತ್ತಿದ್ದೆ ಎಂದು ಸಿಡಿಮಿಡಿಗೊಂಡರು.
ಪಂಚಾಯತ್ ಪಿಡಿಒಗಳು ದುಡ್ಡು ಕೊಟ್ರೆ ಏನನ್ನಾದ್ರೂ ಮಾಡ್ತಾರೆ. ಡಿಸಿ ಅವರು ಕೇವಲ ಸಭೆ, ಪ್ರೆಸ್ ಕಾನ್ಫರೆನ್ಸ್ ಮಾಡೋದಲ್ಲ, ಕಾನೂನು ರೀತಿ ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಾರಿ ನೋಡಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಸಿದರು.
ಹಾಸನದಲ್ಲಿ ನಿವೇಶನದ ದಂಧೆ ನಡೆಯುತ್ತಿದ್ದು, ನಾನು ಉಸ್ತುವಾರಿ ಸಚಿವನಾಗಿದ್ದ ವೇಳೆ ನಗರದ ಸುತ್ತ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ 12 ಸಾವಿರ ನಿವೇಶನ ಮಾಡಿ ರೈತರೊಟ್ಟಿಗೆ ಸಭೆ ನಡೆಸಿ 50-50 ಅನುಪಾತದಲ್ಲಿ ಹಂಚಲು ನಿರ್ಧರಿಸಲಾಗಿತ್ತು. ಅದು ಅನುಷ್ಠಾನಕ್ಕೆ ಬಂದಿದ್ರೆ ಅಡಿಗೆ 500ರೂ. ಅಂತೆ ನಿವೇಶನ ಹಂಚಬಹುದಿತ್ತು. ಆದ್ರೆ, ಸರ್ಕಾರ ಖಾಸಗಿಯವರೊಟ್ಟಿಗೆ ಶಾಮೀಲಾಗಿ ಖಾಸಗಿ ಲೇಔಟ್ದಾರರಿಗೆ ಶ್ರೀರಕ್ಷೆಯಾಗಿದ್ದಾರೆ. ಹೀಗೆ ಎಲ್ಲಾ ಖಾಸಗಿಯವರೇ ಲೇಔಟ್ ಮಾಡುವುದಾದ್ರೆ ನಗರಾಭಿವೃದ್ಧಿ ಪ್ರಾಧಿಕಾರ ಏಕೆ ಬೇಕು? ಹೌಸಿಂಗ್ ಬೋರ್ಡ್ ಯಾಕೆ ಬೇಕು? ಮುಚ್ಚಿಬಿಡಲಿ ಎಂದು ರೇವಣ್ಣ ಹೇಳಿದ್ರು.
ನಾನು ದಲಿತ ಸಮುದಾಯದ ಅಧ್ಯಕ್ಷೆ ಎಂಬ ಒಂದೇ ಕಾರಣಕ್ಕೆ ಜಿಲ್ಲಾ ಪಂಚಾಯತ್ ಸಭೆಗೆ ಜೆಡಿಎಸ್ ಸದಸ್ಯರು ಸಾಮೂಹಿಕವಾಗಿ ಗೈರಾಗುತ್ತಿದ್ದಾರೆಂಬ ಅಧ್ಯಕ್ಷೆ ಶ್ವೇತಾ ದೇವರಾಜ್ ಆರೋಪಕ್ಕೆ ಪ್ರತ್ರಿಕ್ರಿಯಿಸಿದ ಹೆಚ್.ಡಿ.ರೇವಣ್ಣ, ಇವರಿಂದ ನಾನು ಕಲಿಯಬೇಕೆನ್ರಿ? ಅವರ ಕಾರ್ಯವೈಖರಿ ಹೇಗಿದೆ ಅಂತಾ ಕಾಂಗ್ರೆಸ್‌ನವರೇ ಹೇಳುತ್ತಾರೆ. ಜಿ.ಪಂ ಸಭೆಯಲ್ಲಿ ಅವ್ರೆ ಕೂಗಾಡಲಿಲ್ವಾ? ಏನೋ ಅಪ್ಪಿತಪ್ಪಿ ಅಧ್ಯಕ್ಷರಾಗಿದ್ದಾರೆ, ಮೊದಲು ಕಾಂಗ್ರೆಸ್ ಸದಸ್ಯರನ್ನ ಸರಿಮಾಡಿಕೊಳ್ಳಲು ಹೇಳಿ ಎಂದು ಗುಡುಗಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರೊ ಲಿಫ್ಟ್ನಲ್ಲಿ ನಾನು ಮತ್ತು ನಮ್ಮ ಶಾಸಕರೇ ಎರಡು ಬಾರಿ ಸಿಕ್ಕಿ ಹಾಕಿಕೊಂಡು ಬದುಕಿ ಬಂದಿರೋದೇ ಹೆಚ್ಚು. ಅದರ ಗುತ್ತಿಗೆ ಕೆಲಸವನ್ನು ಯಾರಿಗೆ ಕೊಟ್ಟಿದ್ರು ಅಂತಾ ಹೇಳ್ಬೇಕಾ ಎಂದು ಹಿಂದೆ ತಮಗಾದ ಕೆಟ್ಟ ಅನುಭವವನ್ನು ರೇವಣ್ಣ ಇದೇ ವೇಳೆ ಬಿಚ್ಚಿಟ್ಟರು.