ಹಾಸನ: ಸಣ್ಣ ವಿಚಾರವನ್ನು ದೊಡ್ಡದು ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷದವರೇ ಬೇಸರಗೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಗೆ ಕ್ಷಮೆ ಯಾಚಿಸುವ ಮೂಲಕ ದಂಡವನ್ನೂ ಪಾವತಿ ಮಾಡಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ಹಾಸನದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಕರೆಂಟ್ ಕಳ್ಳ ಪೋಸ್ಟರ್ ಅಂಟಿಸಿದ್ದು ಸರಿಯಲ್ಲ. ಎರಡು ಬಾರಿ ಮುಖ್ಯಮಂತ್ರಿ ಆದವರನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು ಎಂದರು.
ಕುಮಾರಸ್ವಾಮಿ ಅವರಿಗೆ 2 ಸಾವಿರ ರೂ ಬಿಲ್ ಕಟ್ಟಲು ಯೋಗ್ಯತೆ ಇಲ್ಲ ಎಂಬಂತೆ ಬಿಂಬಿಸುವುದು ಸರಿಯಲ್ಲ. ಕಾಂಗ್ರೆಸ್‌ನವರು ಲೂಟಿ ಮಾಡಿರುವ ಭೂಮಿಯ ಬಗ್ಗೆ ತನಿಖೆ ಮಾಡಿದರೆ ಅದಕ್ಕೆ ಪೆನಾಲ್ಟಿ ಯಾರು ಕಟ್ತಾರೆ? ರೈತರನ್ನು ಕಳ್ಳರು ಅಂತೀರಾ? ಎಷ್ಟು ರೈತರು ಈ ರೀತಿ ಸಂಪರ್ಕ ಪಡೆದುಕೊಂಡಿರುತ್ತಾರೆ. ಅವರಿಂದ ಪೆನಾಲ್ಟಿ ಪಡೆದು ಸುಮ್ಮನಾಗಲ್ವಾ? ನೀವು ರೈತರಿಗೆ ಕೊಡಬೇಕಾದ ಟಿಸಿಗಳನ್ನು ಸರಿಯಾಗಿ ಕೊಡಿ. ಹಾಸನ ಜಿಲ್ಲೆಯೊಂದಕ್ಕೇ 27 ಸಾವಿರ ಟಿಸಿ ಬೇಕು ಎಂದು ರೈತರು ಹಣ ಕಟ್ಟಿದ್ದಾರೆ. ಟಿಸಿ ಕೊಡದಿದ್ದಕ್ಕೆ ಅವರು ಬೇರೆಡೆಯಿಂದ ಕನೆಕ್ಷನ್ ತೆಗೆದುಕೊಂಡರೆ ಅವರನ್ನು ಕರೆಂಟ್ ಕಳ್ಳರು ಅಂತೀರಾ? ರೈತರ ಹತ್ತಿರ 20 ಸಾವಿರ ರೂಪಾಯಿ ಕಟ್ಟಿಸಿಕೊಂಡು ಟಿಸಿ ಕೊಡುತ್ತಿಲ್ಲವಲ್ಲ. ರೈತರ ಹಣ ತಿಂದಿರುವ ನೀವೆಂಥ ಕಳ್ಳರು? ಇದನ್ನೆಲ್ಲ ಬಿಟ್ಟು ಪ್ರಜ್ಞಾವಂತ ರಾಜಕೀಯ ಮಾಡಿ ಎಂದು ಹೇಳಿದರು.
ಸಿ.ಎಂ.ಇಬ್ರಾಹಿಂ ಉಚ್ಛಾಟನೆ ಕುರಿತು ಪ್ರತಿಕ್ರಿಯಿಸಿ, ಇದು ಟೆಕ್ನಿಕಲ್ ವಿಷಯ. ನಮ್ಮಲ್ಲಿ ಕೋರ್ ಕಮಿಟಿ ಇದೆ. ನಾನದರ ಸದಸ್ಯ ಅಲ್ಲ, ನಾನು ರಾಷ್ಟ್ರೀಯ ಕಮಿಟಿಯಲ್ಲಿದ್ದೇನೆ. ಅವರೂ ರಾಷ್ಟ್ರೀಯ ಕಮಿಟಿ ಮೆಂಬರ್ ಇದ್ದರು. ಈಗ ಅಮಾನತು ಮಾಡಿದ್ದಾರೆ. ದೇವೇಗೌಡರು ರಾಷ್ಟ್ರೀಯ ಕಮಿಟಿ ಸಭೆ ಕರೆದು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಪ್ರಜ್ವಲ್ ತಿಳಿಸಿದರು.
ಕಾಂಗ್ರೆಸ್‌ನವರು ಎಲೆಕ್ಷನ್‌ಗೆ ಆರು ತಿಂಗಳು ಮುಂಚೆ ವೈಟ್ ಆ್ಯಂಡ್ ವೈಟ್ ಬಟ್ಟೆ ಹಾಕಿ ಬರುತ್ತಾರೆ. ನಮಗೆ ಬೈತಾರೆ, ಸೋತ ಮೇಲೆ ಮನೆಗೆ ಹೋಗುತ್ತಾರೆ, ಇನ್ನೇನೂ ಆಗಲ್ಲ ಎಂದರು. ಇದೇ ವೇಳೆ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಸ್ವಾಗತಾರ್ಹ. ಒಂದು ಕಡೆ ಅವರು, ಇನ್ನೊಂದೆಡೆ ಕುಮಾರಣ್ಣ, ಇಬ್ಬರೂ ಡೈನಾಮಿಕ್ ಲೀಡರ್ ಇದ್ದಾರೆ. ಎಲ್ಲೋ ಒಂದು ಕಡೆ ನಮ್ಮ ಹೊಂದಾಣಿಕೆಗೆ ಶಕ್ತಿ ಸಿಕ್ಕಿದಂತೆ ಆಗಿದೆ. ಹೋರಾಟ ಮಾಡಲು ನಾವೆರಲ್ಲೂ ತಯಾರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ. ಖಂಡಿತಾ 28 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಪ್ರಜ್ವಲ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ದಂಡ ಕಟ್ಟಿದ್ದೇನೆ, ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಿ: ಹೆಚ್.ಡಿ.ಕುಮಾರಸ್ವಾಮಿ