ಹಾಸನ: ನಮ್ಮ ದೇಶದಲ್ಲಿ ವಿವಿಧ ಜಾತಿ ಜನಾಂಗದವರಿದ್ದು, ನರೇಂದ್ರ ಮೋದಿ ಮಾತನಾಡುವ ಧಾಟಿಯನ್ನು ನೋಡಿದ್ರೆ, ಹಿಂದೂ ರಾಷ್ಟ್ರ ಮಾಡಬಹುದು. ಹಾಗಾಗಿ ನಾವೆಲ್ಲರೂ ಒಟ್ಟು ಸೇರಿ ಸಿಎಎ ಎನ್ಆರ್ಸಿ, ಎನ್ಆರ್ಪಿ ಕಾಯ್ದೆಗಳನ್ನು ವಿರೋಧಿಸಬೇಕು ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಆರೋಪಿಸಿದ್ದಾರೆ.
ನಗರದ ಪೆನ್ಷನ್ ಮೊಹಲ್ಲಾ ಸಮೀಪದ ಈದ್ಗಾ ಮೈದಾನದಲ್ಲಿ ನಡೆದ ಸಿಎಎ ಮತ್ತು ಎನ್ಆರ್ಪಿ ವಿರೋಧಿಸಿ ನಡೆದ ಸಮಾವೇಶದಲ್ಲಿ ಮಾತನಾಡಿ, ಸಿಎಎ ಮತ್ತು ಎನ್ಆರ್ಸಿ ಹಾಗೂ ಎನ್ಆರ್ಪಿ ಕಾಯ್ದೆಗಳನ್ನು ಜಾರಿಗೆ ತರಬೇಕೆಂದುಕೊಂಡಿರುವುದು ಅಷ್ಟು ಸುಲಭವಾದುದಲ್ಲ. ಈ ಕಾಯ್ದೆಯಿಂದ ಕೇವಲ ಮುಸ್ಲೀಮರಿಗೆ ಮಾತ್ರವಲ್ಲದೆ ಭಾರತದ ಹಿಂದೂಗಳಿಗೂ ತೊಂದರೆಯಾಗುತ್ತದೆ.
ರಾಜ್ಯಸಭೆಯಲ್ಲಿ ಪ್ರಾದೇಶಿಕ ಪಕ್ಷವನ್ನು ದನಿ ಎತ್ತಲಾಗದಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ. ಗುಲಾಂ ನಬಿ ಆಜಾದ್ ಮಾತುಗಳು ರಾಜ್ಯ ಸಭೆಯ ಕಡತಕ್ಕೆ ಹೋಗಬಾರದು ಎಂದು ಆಜ್ಞೆ ಮಾಡಿದ್ದಾರೆ. ಬಡತನ, ನಿರುದ್ಯೋಗ ಸಮಸ್ಯೆ ಇಂದು ದೇಶದಲ್ಲಿ ತಾಂಡವವಾಡುತ್ತಿದೆ. ಅಂಬೇಡ್ಕರ್ ತಮ್ಮ ಸಂವಿಧಾನದಲ್ಲಿ ಪ್ರತಿಯೊಂದು ಧರ್ಮಕ್ಕೂ ನ್ಯಾಯ ಒದಗಿಸಿದ್ದಾರೆ.
ರಾಷ್ಟ್ರದಲ್ಲಿ ಮುಂದೆ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸದೇ ಹೋದರೆ ಸಾಕಷ್ಟು ಕಷ್ಟವಾಗುತ್ತದೆ. ಜಾತ್ಯಾತೀತವಾದಿಗಳು ಒಟ್ಟಾಗಿ ಕೆಲಸ ಮಾಡಿದರೆ ಮುಂದಿನ ಅನಾಹುತವನ್ನು ತಡೆಯಬಹುದು. ಇಲ್ಲವಾದರೆ ದೇಶ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ದೆಹಲಿ ಚುನಾವಣೆ ನಡೆಯುತ್ತಿದ್ದು ಎಎಪಿ ಪಕ್ಷವನ್ನು ಸುಖಾಸುಮ್ಮನೆ ಗುರಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಅವರು, ಈ ರಾಷ್ಟ್ರದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ನಾವೆಲ್ಲಾ ಒಂದಾಗಬೇಕು. ಇದರಿಂದ ಮಾತ್ರ ಮುಂದಿನ ದಿನಗಳಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನೋಡಿದರೆ ಕರುಳು ಕಿತ್ತು ಬರುವಂತೆ ಆಗುತ್ತದೆ. ಗಾಂಧೀಜಿಯವರ ಹೋರಾಟವನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಅನಂತ್ ಕುಮಾರ ಹೆಗಡೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಮಾತ್ರ ಹೊರಗಿಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದ ಅವರು, ಈ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ, ಈ ವಿಚಾರವನ್ನು ನಾನು ಸುಪ್ರಿಂಕೋರ್ಟ್ ಅಂಗಳಕ್ಕೆ ಕೊಂಡೊಯ್ದರೂ ಕೂಡ ಇಂದಿನ ದಿನಗಳಲ್ಲಿ ತಮ್ಮ ಬಲ ಕಳೆದುಕೊಳ್ಳುತ್ತಿವೆ ಎಂಬ ಆತಂಕವಿದೆ. ನಮಗೆ ನ್ಯಾಯ ಸಿಗದಿದ್ದಾಗ ನ್ಯಾಯಾಲಯದ ಮುಂದೆ ಹೋಗಬೇಕಿದೆ. ಆದ್ದರಿಂದ ನ್ಯಾಯಾಲಯಗಳು ಅದರ ಘನತೆ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.