ಹೊಳೆನರಸೀಪುರ(ಹಾಸನ): ಪಕ್ಷಕ್ಕೆ ಒಳ್ಳೆ ಹೆಸರು ಬರಲಿದೆ ಎಂಬ ನಂಬಿಕೆಯಿಂದ ಕಾಂಗ್ರೆಸ್ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಲು ಹೊರಟಿದೆ. ಇದರಿಂದ ರಾಜ್ಯಕ್ಕೆ ಅನುಕೂಲವಾಗುವ ಫಲಿತಾಂಶ ಬಂದರೆ ಇದಕ್ಕೆ ನನ್ನ ಸ್ವಾಗತವಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದರು.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ದೇವಾಲಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದದರು. ಹಿಂದೆ ಐದು ವರ್ಷ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಡಿಕೆ ಶಿವಕುಮಾರ್ ಅವರೇ ನೀರಾವರಿ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ಮೇಕೆದಾಟು ಯೋಜನೆ ಜಾರಿಗೆ ತರಲಿಲ್ಲ. ಆದರೆ, ಇಂದು ಕಾಂಗ್ರೆಸ್ ಹಿತಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಟೀಕಿಸಿದರು.
ಮತಾಂತರ ಕಾಯ್ದೆ ಜಾರಿ ಅವಶ್ಯಕತೆ ಇರಲಿಲ್ಲ. ಇದರಿಂದ ಯಾರಿಗೆ ಅನುಕೂಲವಾಗಿದೆ ಎಂಬುದು ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಅವರು ಹಿಂದೆ ಬಿಲ್ ಪಾಸ್ ಮಾಡಿದರು. ಅದನ್ನೆ ಇಂದು ಬಿಜೆಪಿ ಅವರು ಪಾಸ್ ಮಾಡಿದ್ದಾರೆ ಅಷ್ಟೇ. ಜೆಡಿಎಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ಮತಾಂತರಗೊಂದಲ ಆಗಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹುತೇಕ ರಾಜ್ಯದಲ್ಲಿ ಗಲಭೆಗಳಾದವು. ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಪೆಟ್ರೋಲ್ ಹಾಕಿ ಸುಡಲಾಯಿತು. ಇಂತಹ ಹಲವು ಘಟನೆ ಇಂದಿಗೂ ನನಗೆ ನೆನಪಿದೆ. ಆದರೆ, ಇಂದು ಆ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾರೇ ಅಧಿಕಾರಕ್ಕೆ ಬಂದರೂ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಆಡಳಿತ ನಡೆಸಬೇಕು. ಕೆಲವರು ಪ್ರಾದೇಶಿಕ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಯಾರೂ ಸಹ ನನಗೆ ಹೊಸಬರಲ್ಲ. ಪಕ್ಷದ ಬಲವರ್ಧನೆಗೆ ನಾನು ದುಡಿಯುತ್ತೇನೆ. ಕಳೆದ ಚುನಾವಣೆಯಲ್ಲಿ ಶೇ. 20 ಮತ ಬಂದಿದೆ .ಜ.15 ರ ನಂತರ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ ಎಂದರು.
ಮಾಜಿ ಪ್ರಧಾನಿ ಹೆಚ್ .ಡಿ. ದೇವೇಗೌಡರು ತಮ್ಮ ಹುಟ್ಟೂರಾದ ಹರದನಹಳ್ಳಿಯಲ್ಲಿ ಕುಟುಂಬದೊಂದಿಗೆ ಶ್ರೀ ದೇವೇಶ್ವರ ಸ್ವಾಮಿಯ ದೇವಾಲಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಕಳಸ ಪ್ರತಿಷ್ಠಾಪನೆ, ಹೋಮ ಹವನ, ಅಭಿಷೇಕ ಸೇರಿದಂತೆ ಮೊದಲಾದ ಪೂಜಾ ಕಾರ್ಯಗಳು ನಡೆದವು. ಈ ವೇಳೆ ಪತ್ನಿ ಚನ್ನಮ್ಮ, ಹೆಚ್ ಡಿ ರೇವಣ್ಣ , ಭವಾನಿ ರೇವಣ್ಣ, ಮೊಮ್ಮಗ ಸೂರಜ್ ರೇವಣ್ಣ ಭಾಗವಹಿಸಿದ್ದರು.
ವಿಶೇಷ ಕಳಶ ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಹೂವಿನ ಅಲಂಕಾರ ಸೇರಿದಂತೆ ಮಂಗಳ ವಾದ್ಯಗಳೊಂದಿಗೆ ಪೂಜೆ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕ ಶೀಘ್ರವೇ ಕಾಯ್ದೆಯಾಗಿ ಜಾರಿಗೆ ಬರಲಿ: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ