ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈಗಾಗಲೇ ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಲು ವೇದಿಕೆ ಸಜ್ಜು ಮಾಡಿಕೊಂಡು ಅಬ್ಬರದ ಪ್ರಚಾರ ನಡೆಸುವ ವೇಳೆಯಲ್ಲಿಯೇ ಮತ್ತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಮರಿಳಿ ತವರು ಕ್ಷೇತ್ರಕ್ಕೆ ಕರೆ ತರುವ ಪ್ರಯತ್ನಗಳು ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜ್ಯೋತಿಷಿಯೊಬ್ಬರು ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರವನ್ನು ತೊರೆಯಬಾರದು ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ಈಗ ಜೆಡಿಎಸ್ ನಾಯಕರಲ್ಲಿಯೇ ಗೊಂದಲ ಸೃಷ್ಟಿಯಾಗಿದೆ. ಅದಕ್ಕಾಗಿ ಸಚಿವ ರೇವಣ್ಣ ಅವರು ಆಲೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯ ನಂತರ ದೇವೇಗೌಡರು ಹಾಸನ ಲೋಕಸಭೆ ಕ್ಷೇತ್ರದಲ್ಲಿಯೇ ಸ್ಪರ್ಧೆಗೆ ಆಹ್ವಾನ ಮಾಡುವ ರೀತಿ ಹೇಳಿಕೆ ನೀಡಿರುವುದು ಕೂಡ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ವೇದಿಕೆ ಕಲ್ಪಿಸಿದಂತಾಗಿದೆ. ಇದರಿಂದಾಗಿ ಹಾಸನ ಲೋಕಸಭಾ ಕ್ಷೇತ್ರ ರಾಜಕೀಯ ಕುತೂಹಲ ಕೆರಳಿಸಿದೆ.
ಜೆಡಿಎಸ್ನ ನಿಯೋಜಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕೂಡ ಹಾಸನ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸುವುದು ಒಳಿತು ಎನ್ನುವ ಹೇಳಿಕೆ ನೀಡಿರುವುದು ಕೂಡ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿದೆ. ಈಗಾಗಲೇ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದ ವೇಳೆಯಲ್ಲಿಯೇ ಒಂದು ರೀತಿ ಆತಂಕದ ಹೇಳಿಕೆ ನೀಡುತ್ತಿರುವುದು ಸರ್ಧೆಯಿಂದ ಯೂ-ಟರ್ನ್ ಹೊಡೆದಂತೆ ಕಾಣುತ್ತಿದೆ.
ಒಂದು ಕಡೆ ತಾತನ ಆಸೆ, ಮತ್ತೊಂದು ಕಡೆ ಕ್ಷೇತ್ರದ ಒಲವು ಹೊಂದಿರುವ ಪ್ರಜ್ವಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಬಿರುಸುಗೊಳಿಸಿದ್ದಾರೆ. ಇಂದು ಕಾರ್ಯಕರ್ತರ ಮನೆ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ತಮ್ಮ ರಾಜಕೀಯ ನಿಲುವು ವ್ಯಕ್ತಪಡಿಸಿದ್ದಾರೆ.
ದೇವೇಗೌಡರು ಕಳೆದ 60 ವರ್ಷದಿಂದ ಜಿಲ್ಲೆಯಲ್ಲಿ ರಾಜಕೀಯ ಪ್ರಭಾವ ಬೀರಿದ್ದಾರೆ. ನಾನು ದೇವೇಗೌಡರೊಟ್ಟಿಗೆ ಚರ್ಚಿಸುತ್ತೇನೆ. ಯಾವುದೇ ಕಂಡೀಷನ್ ಮೇಲೆ ದೇವೇಗೌಡರು ಸ್ಪರ್ಧಿಸೋ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಮೈತ್ರಿ ಸರ್ಕಾರದ ವಿರುದ್ಧ ಪ್ರಜ್ವಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹಾಸನದ ಮನೆ ಮನೆಗಳಲ್ಲೂ ದೇವೇಗೌಡರ ಫೋಟೋ ಇಟ್ಟು ಪೂಜಿಸುತ್ತಿದ್ದಾರೆ. ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸಿದರೆ ಸಂತೋಷ. ನಾನು ಇನ್ನೂ ಹೆಚ್ಚು ಕೆಲಸ ಮಾಡುತ್ತೇನೆ ಎಂದಿರುವ ಅವರು, ಹಾಸನದಲ್ಲಿ ಗೌಡ್ರು 6 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೌಡರ ಕುಟುಂಬಕ್ಕೆ 9 ಅಶುಭ ಎಂಬ ಎ.ಮಂಜು ಹೇಳಿಕೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಮನೆ ದೇವರ ಅದೃಷ್ಟ ಸಂಖ್ಯೆ 9 ಆಗಿದ್ದು, ನಾವ್ಯಾಕೆ ಸೋಲೋಣ, ಗೆಲುವು ನಿಶ್ಚಿತ ಎಂದು ಟಾಂಗ್ ನೀಡಿದ್ದಾರೆ.