ಹಾಸನ: ಹಾಸನದ ವಿಮಾನ ನಿಲ್ದಾಣವನ್ನು ಮೊದಲು ಅನುಷ್ಠಾನಕ್ಕೆ ತಂದು ಕಾರ್ಯರೂಪವಾದ ನಂತರ ಯಾರ ಹೆಸರನ್ನಾದರೂ ಇಟ್ಟುಕೊಳ್ಳಲಿ. ಆದರೆ ನನಗೆ ಕೆಲಸ ಆಗುವುದು ಮುಖ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ತಾಲೂಕಿನ ಉಪ್ಪಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ವಿಮಾನ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಲಿ, ನಂತರದಲ್ಲಿ ಬೇಕಾದ್ರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಸರು ಇಲ್ಲವೇ ಹಾಸನ ಶಾಸಕ ಪ್ರೀತಂ ಜೆ. ಗೌಡ ಹೆಸರನ್ನೇ ಇಟ್ಟುಕೊಳ್ಳಲಿ, ಇದಕ್ಕೆ ನನ್ನ ಅಭ್ಯಂತರವಿಲ್ಲ. ನನಗೆ ಕೆಲಸ ಆಗಬೇಕು ಅಷ್ಟೆ ಎಂದರು.
ತಮಿಳುನಾಡಿನವರು ನಮ್ಮ ಪಾಲಿನ ನೀರನ್ನು ಕಬಳಿಸಲು ಯತ್ನಿಸುತ್ತಿರುವ ಬಗ್ಗೆ ನಾನು ಗಮನಿಸಿದ್ದೇನೆ. ನನ್ನ ಜೀವನ ಪರ್ಯಂತ ನೀರಾವರಿಗಾಗಿಯೇ ಹೋರಾಟ ಮಾಡಿದ್ದೇನೆ. ಯಗಚಿ, ಹೇಮಾವತಿ ಜಲಾಶಯ ಕಟ್ಟಲು ಶ್ರಮವಹಿಸಿರುವೆ. ನಾನು ಅಂದುಕೊಂಡ ಮಟ್ಟಿಗೆ ನೀರಾವರಿ ಯೋಜನೆ ಮಾಡಲು ಸಾಧ್ಯವಾಗಿಲ್ಲ. ನೀರಾವರಿ ವಿಚಾರದಲ್ಲಿ ಎರಡೂ ಪಕ್ಷಗಳು ಹೋರಾಟ ಮಾಡಲಿಲ್ಲ. ನಾವು ಪ್ರಾದೇಶಿಕ ಪಕ್ಷವಾಗಿ ಕೋರ್ಟ್ನಲ್ಲಿ ಹೋರಾಟ ಮಾಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ಎನ್ನುತ್ತಾರೆ. ಆದರೆ ಈ ಯೋಜನೆ ಮಾಡುವವರು ಯಾರು? ರಾಯಚೂರಿನಲ್ಲಿ ಬಡ ಲಿಂಗಾಯತ ರೈತನೋರ್ವ ನನ್ನ ಹೆಸರಿನಲ್ಲಿ ಪ್ರತಿಮೆ ಮಾಡಿದ್ದು, ಪ್ರತಿಮೆ ಇರುವ ಜಾಗವನ್ನು ನನ್ನ ಹೆಸರಿಗೆ ಬರೆದಿದ್ದಾನೆ. ಅವರ ಅಭಿಮಾನಕ್ಕೆ ತಲೆಬಾಗುತ್ತೇನೆ ಎಂದರು.
ನಾನು ಇನ್ನು ಐದು ವರ್ಷ ಬದುಕಬಹುದು. ರೈತರ ಸಮಸ್ಯೆಗಳಿಗೆ ಮತ್ತು ರಾಜ್ಯದ ಜನರ ಹಿತಕ್ಕಾಗಿ ಹೋರಾಟ ಮಾಡಬೇಕು ಎಂಬ ಪರಿಸ್ಥಿತಿ ಬಂದರೆ ಪ್ರಾಣ ಇರುವ ತನಕ ಹೋರಾಟ ಮಾಡುತ್ತೇನೆ. ಪಾದಯಾತ್ರೆ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ರಾಜ್ಯದ ಹಲವಾರು ಸಮಸ್ಯೆಗಳಿಗೆ ಹೋರಾಟ ಮಾಡುವ ಬಗ್ಗೆ ಧ್ವನಿ ಎತ್ತುತ್ತೇವೆ. ಸಿದ್ದರಾಮಯ್ಯ ಹೋರಾಟದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗಾಗಲೇ ಎಲ್ಲ ಸಮುದಾಯಗಳು ಮೀಸಲಾತಿಗೆ ಹೋರಾಟ ನಡೆಸುತ್ತಿವೆ. ಸಂವಿಧಾನದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಯಡಿಯೂರಪ್ಪ ಹೇಗೆ ನಿಭಾಯಿಸುತ್ತಾರೋ ನನಗೆ ಗೊತ್ತಿಲ್ಲ. ಇದೊಂದು ಜಟಿಲ ಸಮಸ್ಯೆಯಾಗಿದ್ದು, ಇದರ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದನ್ನು ಗಮನಿಸಿದ್ದೇನೆ. ಒಂದು ಸರ್ಕಾರ ತನ್ನೆಲ್ಲ ಬಲವನ್ನು ರೈತರ ಮೇಲೆ ಪ್ರದರ್ಶಿಸುವುದು ಸರಿಯಲ್ಲ. ಪಂಜಾಬಿನ ರೈತರು ನಮ್ಮ ದೇಶದಲ್ಲೇ ಮಾದರಿಯಾಗಿದ್ದಾರೆ. ಅಂತಹ ಮಾದರಿ ರೈತರೇ ಬೀದಿಗೆ ಇಳಿದಿದ್ದಾರೆ ಎಂದು ಮರುಗಿದ ಅವರು, ರೈತರ ಜೊತೆ ಸರ್ಕಾರ ಕುಳಿತು ಚರ್ಚೆ ಮಾಡಿ ತೀರ್ಮಾನಿಸಬೇಕು. ಈ ಕೊರೆಯುವ ಚಳಿಯಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ ಒಳಿತು ಎಂದು ನುಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ, ಹಾಲಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಇತರರು ಪಾಲ್ಗೊಂಡಿದ್ದರು.