ಹಾಸನ: ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವ ಕಾಯ್ದೆಗಳು ರೈತರಿಗೆ ಮಾರಕವಾಗಿವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಹಾಸನ ನಗರದ ಸಂಸದ ಪ್ರಜ್ವಲ್ ರೇವಣ್ಣನವರ ವಸತಿಗೃಹದಲ್ಲಿ ಮಾತನಾಡಿದ ಅವರು, ಈ ಕಾಯ್ದೆಗಳಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಚೆಕ್ ಮುಖಾಂತರ ರೈತರಿಗೆ ಹಣ ನೇರವಾಗಿ ಜಮೆ ಮಾಡುತ್ತೇವೆ ಎಂದವರು ಇದುವರೆಗೂ ವಿತರಣೆಯಾಗಿಲ್ಲ ಎಂದರು.
1985ರಿಂದ ಇಲ್ಲಿಯವರೆಗೆ ಅನೇಕ ತಿದ್ದುಪಡಿಗಳನ್ನು ನೋಡಿದ್ದೇನೆ. ನಾನು ದಾವೂಸ್ಗೆ ಹೋಗಿ ಬಂದ ಮೇಲೆ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೆ. ಮನಮೋಹನ್ ಸಿಂಗ್ ಅವರ ಜೊತೆ ಸೇರಿ ವಾಣಿಜ್ಯ ವ್ಯವಹಾರ ಕಾಯ್ದೆಗೆ ತಿದ್ದುಪಡಿ ತಂದಿದ್ದೆ.
ಕೈಗಾರಿಕೆಗಳ ನಿರ್ಮಾಣಕ್ಕೆಂದು ರೈತರಿಂದ ಭೂಮಿ ಖರೀದಿಸಿ ಅಂತಹ ಭೂಮಿಯನ್ನು ಯಾವುದೇ ಕೈಗಾರಿಕೆಗೆ ಬಳಕೆ ಮಾಡದೆ ಹಾಗೆ ಉಳಿಸಿದ್ದಾರೆ ಎನ್ನುವ ಮೂಲಕ ಹಾಸನದ ಐಐಟಿ ಮತ್ತು ವಿಮಾನ ನಿಲ್ದಾಣದ ಭೂಮಿ ಖರೀದಿ ಬಗ್ಗೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಇಂದು ಭೂಮಿಯ ಬೆಲೆ ಹೆಚ್ಚಾಗಿರುವುದರಿಂದ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡಲು ಬಿಜೆಪಿ ಸರ್ಕಾರ ಇಂತಹ ತಿದ್ದುಪಡಿ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಎಪಿಎಂಸಿ ಕಾಯ್ದೆಯು ಕೂಡ ರೈತರಿಗೆ ಅನುಕೂಲವಲ್ಲ. ನನಗೆ ಸಿಕ್ಕಿರೋ ಅವಕಾಶವನ್ನು ಹೋರಾಟದ ಮೂಲಕ ಬಳಸಿಕೊಳ್ಳುತ್ತೇನೆ. ಕಾಯ್ದೆ ವಿರುದ್ಧ ಉಗ್ರ ಹೋರಾಟ ಮಾಡುತ್ತೇನೆ ಎಂದರು.
ರಾಜ್ಯದ 30 ಜಿಲ್ಲೆಗಳಲ್ಲಿ ನಾವು ಹೋರಾಟ ಮಾಡಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುತ್ತೇವೆ. ರಾಜ್ಯದ ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಮಾಡುತ್ತೇವೆ ಎಂದರು.