ಹಾಸನ: ತಾಲೂಕಿನಲ್ಲಿ 1091 ಕೆರೆಗಳಿದ್ದು, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳನ್ನು ಸರ್ವೆ ಮಾಡಿ ತೆರವುಗೊಳಿಸಿ ಎಂದು ಹಾಸನ ತಹಶೀಲ್ದಾರ್ ಶಿವಶಂಕರಪ್ಪ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಕೆರೆಗಳ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆರೆಗಳ ಪೂರ್ಣ ಮಾಹಿತಿಯನ್ನು ಮಾರ್ಚ್ 15 ರೊಳಗೆ ನೀಡುವಂತೆ ಸೂಚಿಸಿದರಲ್ಲದೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಂಗಳಿಗೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಕೆರೆಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಕೆರೆಗಳ ತೆರವುಗೊಳಿಸುವ ಸಮಯದಲ್ಲಿ ಅಕ್ಕ-ಪಕ್ಕದ ರೈತರುಗಳಿಗೆ ತೊಂದರೆಯಾಗದಂತೆ ಕೆಲಸ ಮಾಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಲೋಕಾಯುಕ್ತ ಉಪ ಅಧೀಕ್ಷಕ ಬಾನು ಮಾತನಾಡಿ, ಇ.ಓ. ಹಾಗೂ ಗ್ರಾಮ ಪಂಚಾಯ್ತಿ ಪಿ.ಡಿ.ಓ. ಗಳು ನಿಂತು ಕೆಲಸ ಮಾಡಿಸಿ, ತಿಂಗಳಲ್ಲಿ ಶೇ.80 ರಷ್ಟು ಕೆರೆಗಳ ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿ ಮಾರ್ಚ್ 8 ರೊಳಗೆ ಮಾಹಿತಿ ನೀಡುವಂತೆ ಹೇಳಿದರು.