ಹಾಸನ : ಬಾಲಕ ಕಿಡ್ನಾಪ್ ಆಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಎಸ್ಪಿ ಅವರು ಕರೆ ಮಾಹಿತಿ ನೀಡಿದ್ದಾರೆ. ಅದರಂತೆ ನಾವು ಶೋಧನೆ ಮಾಡುತ್ತಿದ್ದೇವೆ ಎಂದು ಹಾಸನ ಎಸ್ಪಿ ಶ್ರೀನಿವಾಸ್ಗೌಡ ಹೇಳಿದ್ದಾರೆ.
ಉಜಿರೆ ಬಾಲಕನ ಕಿಡ್ನಾಪ್ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಎಂಟು ವರ್ಷದ ಮಗು ಕಿಡ್ನಾಪ್ ಆಗಿದ್ದು ಹಾಸನದ ಎಲ್ಲ ಕಡೆ ಚೆಕ್ ಮಾಡಲಾಗುತ್ತದೆ. ಈಗಾಗಲೇ ನಾವು ಎಲ್ಲ ಕಡೆ ಚೆಕ್ಪೋಸ್ಟ್ ಹಾಕಿದ್ದೇವೆ ಎಂದರು.
ವಾಹನದ ನಂಬರ್ ಚೆಕ್ ಮಾಡುತ್ತಿದ್ದೇವೆ. ಇದುವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಮಂಗಳೂರು ಪೊಲೀಸರಿಗೆ ನಮ್ಮ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ.
ಇದನ್ನೂ ಓದಿ : ಉಜಿರೆ ಬಾಲಕ ಅಪಹರಣ ಪ್ರಕರಣ.. ಪೋಷಕರನ್ನು ಭೇಟಿಯಾದ ದ.ಕ. ಎಸ್ಪಿ ಲಕ್ಷ್ಮಿಪ್ರಸಾದ್
ಅಪಹರಣಕಾರರು ಹಾಸನದ ಕಡೆ ಬಂದಿರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈಗಾಗಲೇ ಮಂಗಳೂರಿನ ಕಡೆಯಿಂದ ಹಾಸನಕ್ಕೆ ಬರುವ 8 ಕಡೆ ನಾಕಾಬಂದಿ ಹಾಕಿ ಎಲ್ಲ ಕಡೆ ಚೆಕ್ ಮಾಡಿದ್ದೇವೆ. ಹಾಸನದಲ್ಲಿಯೂ ಎರಡು ಪೊಲೀಸರ ತಂಡ ಕಾರ್ಯಾಚರಣೆ ಮಾಡುತ್ತಿದೆ ಎಂದು ಶೋಧನಾ ಹಾದಿ ಬಗ್ಗೆ ಮಾಹಿತಿ ನೀಡಿದರು.
ಉಜಿರೆ ರಥ ಬೀದಿಯಿಂದ ಅಪಹರಣಕ್ಕೊಳಗಾದ ಎಂಟರ ಹರೆಯದ ಬಾಲಕ ಅನುಭವ್ನನ್ನ ಬಿಡುಗಡೆ ಮಾಡಲು ಅಪಹರಣಕಾರರು 60 ಬಿಟ್ ಕಾಯಿನ್ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಅಂದ್ರೆ, ಸುಮಾರು 17 ಕೋಟಿ ರೂ.ಗಳ ಬೃಹತ್ ಮೊತ್ತದ ಹಣಕ್ಕೆ ಬೇಟಿಕೆಯಿಟ್ಟಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ.
ಈ ಹಿನ್ನೆಲೆ ಹಾಸನ ಪೊಲೀಸರ ಒಂದು ತಂಡ ಮತ್ತು ಮಂಗಳೂರು ಪೊಲೀಸರ ಒಂದು ತಂಡ ರಾತ್ರಿಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಮಂಗಳೂರಿನ ಪ್ರಕರಣವಾಗಿರುವ ಕಾರಣ ನಮಗೆ ಹೆಚ್ಚಿನ ಮಾಹಿತಿಯಿಲ್ಲ. ಹಣಕಾಸಿನ ವಿಚಾರಕ್ಕೆ ಬಾಲಕನನ್ನು ಅಪಹರಿಸಿರಬಹುದು. ಹೆಚ್ಚಿನ ಮಾಹಿತಿ ನಮ್ಮ ಬಳಿಯಿಲ್ಲ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಶ್ರೀನಿವಾಸ್ಗೌಡ ಮಾಹಿತಿ ನೀಡಿದ್ದಾರೆ.