ಹಾಸನ: ಡೀಸೆಲ್ ತುಂಬಿಸಿಕೊಂಡು ಹಣ ಕೊಡದೆ, ಪೆಟ್ರೋಲ್ ಬಂಕ್ ನೌಕರನ ಬಳಿಯಿದ್ದ ಹಣವನ್ನೂ ದರೋಡೆ ಮಾಡಿದ್ದ ಹೆದ್ದಾರಿ ದರೋಡೆಕೋರರನ್ನ ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಹೊಸರೋಡ್ನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಸೈಯದ್ ಶಬೀರ್ (23) ಕೋರಮಂಗಲದ ಪೊಲೀಸ್ ಕ್ವಾಟ್ರಸ್ ಸಮೀಪದ ತೇಜಸ್ (20), ವೆಂಕಟಾಪುರದ ಗೋಪಾಲ್ (20) ಇವರ ಸಹಚರರಾದ ಶಿವಮೊಗ್ಗದ ಶಾನ್ ನವಾಜ್ ಮತ್ತು ಬೆಂಗಳೂರು ಮೂಲಕ ಮಹಮದ್ ಆಶಂ ಬಂಧಿತ ಆರೋಪಿಗಳು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಯೋಗೇಶ್ ಪೆಟ್ರೋಲ್ ಬಂಕ್ನಲ್ಲಿ ಬೆಳಗಿನಜಾವ ಕಾರಿಗೆ ಡೀಸೆಲ್ ಹಾಕಿಸಿಕೊಂಡು ಹಣ ಕೊಡದೆ ಮತ್ತು ಪೆಟ್ರೋಲ್ ಬಂಕ್ ಸಿಬ್ಬಂದಿಯ ಕೈಯಲ್ಲಿದ್ದ ಹಣವನ್ನೂ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ರು. ಇದಲ್ಲದೇ ನಿನ್ನೆ ಮತ್ತೆ ಬೆಳಗಿನ ಜಾವ ಚನ್ನರಾಯಪಟ್ಟಣ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ನಡುವಿನ ಹಿರೀಸಾವೆ ಬಳಿ ಸುಧಾಕರ್ ಎಂಬುವರ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅವರ ಬಳಿಯಿದ್ದ ಮೊಬೈಲ್ ಮತ್ತು ದ್ವಿಚಕ್ರವಾಹನವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಎರಡು ಪ್ರಕರಣವನ್ನು ಭೇದಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದರು.
ಬಂಧಿತರು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆಂದು ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ಮೊಬೈಲ್ ಫೋನ್, ನಂಬರ್ ಪ್ಲೇಟ್ ಇಲ್ಲದ ಕಾರು, 2,300 ರೂ ನಗದು ಸೇರಿ ಒಟ್ಟು 8.17ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.