ಹಾಸನ: ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರ ಸಮಸ್ಯೆ ಬಗ್ಗೆ ಚರ್ಚಿಸಲು ಶಾಸಕ ಪ್ರೀತಮ್ ಜೆ. ಗೌಡ ನಗರದ ಕಟ್ಟಿನಕೆರೆ ಮಾರುಕಟ್ಟೆಗೆ ಬಂದಾಗ ಜನ ಗುಂಪಾಗಿ ಸೇರಿ ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿದ್ದು ಕಂಡು ಬಂತು.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ತರಕಾರಿ ಮತ್ತು ಹಣ್ಣಿನ ವ್ಯಾಪಾರವನ್ನು ನಗರದ ಹೇಮಾವತಿ ಪ್ರತಿಮೆ ಬಳಿ ಇರುವ ಸಿಟಿ ಬಸ್ ನಿಲ್ದಾಣ ಮತ್ತು ಕಾರು ನಿಲ್ದಾಣಕ್ಕೆ ಸ್ಥಳಾಂತರಿಸುವ ವಿಚಾರವಾಗಿ ಚರ್ಚಿಸಲು ಶಾಸಕ ಪ್ರೀತಂ ಗೌಡ ಆಗಮಿಸಿದ್ದರು. ಆದರೆ, ಈ ವೇಳೆ ಗುಂಪಾಗಿ ಸೇರಿದ ಜನ ಸಾಮಾಜಿಕ ಅಂತರ ಕಾಪಾಡುವುದುನ್ನು ಮರೆತಿದ್ದರು. ಸ್ಥಳದಲ್ಲಿ ತಹಶೀಲ್ದಾರ್, ನಗರಸಭೆ ಆಯುಕ್ತ, ಆರೋಗ್ಯಾಧಿಕಾರಿಗಳು ಮತ್ತು ಪೊಲೀಸರು ಇದ್ದರು, ಯಾರೂ ಕೂಡ ಜನರಿಗೆ ತಿಳಿ ಹೇಳುವ ಪ್ರಯತ್ನ ಮಾಡಿಲ್ಲ.
ವರ್ತಕರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಶಾಸಕ ಪ್ರೀತಮ್ ಗೌಡ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿರುವ ದಿನಸಿ, ತರಕಾರಿ, ಹಣ್ಣು ವ್ಯಾಪಾರ ಮಾಡುವ ಅಂಗಡಿಗಳನ್ನು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸಿಟಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದರು.