ಹಾಸನ: ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಸಾಲಾಪುರದ ದೊಡ್ಡೆನಹಳ್ಳಿ ಗ್ರಾಮದಲ್ಲಿ ಬೆಳೆಯಲಾಗಿದ್ದ ಸುಮಾರು 136 ಕೆಜಿ ಗಾಂಜಾ ಗಿಡವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಆರೋಪಿ ಸಂತೋಷ್ (32) ಎಂಬುವನನ್ನು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ತಹಶೀಲ್ದಾರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಅರಸೀಕೆರೆ ಜೇನುಕಲ್ಲು ಕ್ರೀಡಾಂಗಣದ ಸಮೀಪ 150 ಗ್ರಾಂ ತೂಕದ 40 ಗಾಂಜಾ ಪ್ಯಾಕ್ನ್ನು ವಶಪಡಿಸಿಕೊಂಡು, ಮೂರು ಮಂದಿಯನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೆ ತಹಶೀಲ್ದಾರ್ ಸಂತೋಷ್ ಕುಮಾರ್ ನೇತೃತ್ವದ ತಂಡ ಅರಸೀಕೆರೆ ತಾಲೂಕಿನ ಬಾಣಾವರ ಠಾಣಾ ವ್ಯಾಪ್ತಿಯಲ್ಲಿ ಇಂದು ಮತ್ತೆ ಮಧ್ಯಾಹ್ನ 136 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು ಓರ್ವನನ್ನ ಬಂಧಿಸಿದೆ. ಈ ಸಂಬಂಧ ಬಾಣವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೊನ್ನೆ ತಾನೇ ಅರಕಲಗೂಡಿನ ಕೊಣನೂರಿನಲ್ಲಿ 70 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಇದನ್ನು ಕೇರಳದವರು ಪಡೆದುಕೊಂಡು ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಮುಂದಾಗುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು. ನಂತರ ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಇದಾದ ಮರು ದಿನವೇ ಈಗ ಅರಸೀಕೆರೆಯಲ್ಲಿ ಒಂದೇ ದಿನ ಎರಡು ಪ್ರಕರಣಗಳು ದಾಖಲಾಗಿವೆ.