ಹಾಸನ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾವು ಏರುತ್ತಿದೆ. ಚನ್ನರಾಯಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಗೌಡ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚನ್ನರಾಯಪಟ್ಟಣದ ಸಭೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಮಾಡಿದ ಅವರು, ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಸೋತ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದೇವೆ. ಮತ್ತೆ ಇನ್ನೊಬ್ಬರನ್ನು ಹಾಸನದ ಲೋಕಸಭೆಗೆ ಕಳಿಸಿದ್ದೇವೆ. ಇದೀಗ ಮತ್ತೊಬ್ಬ ಮೊಮ್ಮಗ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು ಒಂದೇ ಮನೆಯವರು ಎಲ್ಲಾ ಕಡೆ ಇರಬೇಕು ಎಂದು ಅವರು ತೀರ್ಮಾನ ಮಾಡಿದಂತಿದೆ ಎಂದು ಟೀಕಿಸಿದರು.
ಮನೆಯವರೆಲ್ಲರೂ ಒಂದೊಂದು ಕಡೆ ಹೋದರೆ, ಮನೆ ನೋಡಿಕೊಳ್ಳುವವರು ಯಾರು? ಎಂದು ನಾನು ಜೆಡಿಎಸ್ ಮುಖಂಡರನ್ನು ಪ್ರಶ್ನಿಸಿದಾಗ, 'ಹೌದು, ನಾವು ದೇವೇಗೌಡರ ಕುಟುಂಬಕ್ಕೆ ಪ್ರಾಮಾಣಿಕವಾಗಿರುತ್ತೇವೆ. ಸೂರಜ್ ಅವರನ್ನು ಸೋಲಿಸಿ, ಮನೆಯಲ್ಲಿಯೇ ಇರುವಂತೆ ಮಾಡುತ್ತೇವೆ' ಎಂದು ಜೆಡಿಎಸ್ ಮುಖಂಡರು ಹೇಳಿದ್ದಾರೆಂದು ಶಾಸಕ ಪ್ರೀತಮ್ ಗೌಡ ವ್ಯಂಗ್ಯವಾಡಿದರು.
ಇದರ ಜೊತೆಗೆ, ಬಿಜೆಪಿಯ ವಿಶ್ವನಾಥರಿಗೆ ಮತ ಹಾಕಿ ಗೆಲ್ಲಿಸಿ, ಮನೆಗೆ ಒಬ್ಬ ಮಗನನ್ನು ಉಳಿಸಿ ಎಂದು ಹೇಳಿದ್ದೇನೆ ಎಂದು ಪ್ರೀತಮ್ಗೌಡ ಹೇಳಿದ್ದು, ಹೊಳೆ ನರಸೀಪುರದಲ್ಲೂ ನಾನು ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಲ್ಲಲು ನಾನು ಸಿದ್ಧ, ರೇವಣ್ಣ ಕರೆದರೆ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಪ್ರಕರಣ: ಸಿಸಿಬಿ, ಸಿಐಡಿಗೆ ವಹಿಸೋ ಬಗ್ಗೆ ಇಂದು ನಿರ್ಧಾರ