ಹಾಸನ: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮುಷ್ಕರಕ್ಕೆ ನಗರ ಪ್ರಾದೇಶಿಕ ಸಾರಿಗೆ ಕಾರ್ಯಗಾರದ ಸಿಬ್ಬಂದಿ ಅಂತಿಮ ತೆರೆ ಎಳೆದಿದ್ದಾರೆ. ಬೆಂಗಳೂರು ಮತ್ತು ಹಾಸನದಲ್ಲಿರುವ ಎರಡು ಘಟಕಗಳಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮುಷ್ಕರ ಕೈಬಿಟ್ಟಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಬೆಂಗಳೂರು ಕೇಂದ್ರ ವಿಭಾಗದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆಯ ಮುಖಂಡತ್ವ ವಹಿಸಿಕೊಂಡಿದ್ದ ಸಿಬ್ಬಂದಿ ಮುಖಂಡರುಗಳನ್ನು ಬೇರೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿದ ಹಿನ್ನೆಲೆ ಇನ್ನುಳಿದ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. ನಗರದಲ್ಲಿರುವ ಪ್ರಾದೇಶಿಕ ಕಾರ್ಯಗಾರದಲ್ಲಿ ಸುಮಾರು 128 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಮೂರು ಮಂದಿ ಕಿಮ್ಕೋ ಸಿಬ್ಬಂದಿ ಹಾಗೂ 125 ಮಂದಿ ಕೆಎಸ್ಆರ್ಟಿಸಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಪೈಕಿ ಇಂದು 124 ಮಂದಿ ಹಾಜರಾಗಿದ್ದಾರೆ. ಇನ್ನು ನಾಲ್ಕು ಮಂದಿಯಲ್ಲಿ ಇಬ್ಬರನ್ನು ಪುತ್ತೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇಬ್ಬರು ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ಹಾಜರಾಗಿಲ್ಲ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳಿಂದ ಮುಂದಿನ ದಿನಗಳಲ್ಲಿ ನಮಗೆ ಒಳ್ಳಯದಾಗಬಹುದು ಎಂಬ ಆಶಯದಿಂದ ನಾವು ಕರ್ತವ್ಯಕ್ಕೆ ಮರಳುತ್ತಿದ್ದೇವೆ. ಕಳೆದ ಮೂರು ದಿನಗಳಿಂದ ಮುಷ್ಕರಕ್ಕೆ ಬೆಂಬಲ ನೀಡಿದ್ದೆವು. ಆದ್ರೆ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಕೆಲಸಕ್ಕೆ ಮರಳಿದ್ದೇವೆ. ಸರ್ಕಾರದ ನಿರ್ಧಾರಗಳಿಗೆ ಬದ್ಧರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದು, ವೇತನ ಪರಿಷ್ಕರಣೆ ಸೇರಿದಂತೆ ಕೆಲವು ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಿ ಕೊಟ್ಟರೆ ನಮಗೂ ಅನುಕೂಲವಾಗುತ್ತದೆ ಎನ್ನುವುದು ಸಿಬ್ಬಂದಿ ಮಾತು.
ಮೂರು ದಿನಗಳಿಂದ 2 ಕೋಟಿಗೂ ಹೆಚ್ಚು ನಷ್ಟ
ಹಾಸನ ಘಟಕ ಮೊದಲ ದಿನ ಸುಮಾರು 60 ಲಕ್ಷ ರೂ. ನಷ್ಟ ಅನುಭವಿಸಿದರೆ, ಕಳೆದ ಮೂರು ದಿನಗಳಿಂದ ಸುಮಾರು 2 ಕೋಟಿಗೂ ಹೆಚ್ಚು ನಷ್ಟ ಅನುಭವಿಸುತ್ತಿವೆ. ಸಿಬ್ಬಂದಿ ಕೆಲಸಕ್ಕೆ ಸೇರುವ ಮುನ್ನ ಕೆಲವರು ನಿಬಂಧನೆಗೆ ಒಳಪಟ್ಟು ವಸತಿ ಸೌಲಭ್ಯ ಪಡೆಯುತ್ತಾರೆ. ಇಂತಹವರು ಮುಷ್ಕರಕ್ಕೆ ಭಾಗವಹಿಸುವಂತಿಲ್ಲ. ಇದರ ಜೊತೆಗೆ ತರಬೇತಿ ಹೊಂದಿರುವ ಚಾಲಕರು ಮತ್ತು ನಿರ್ವಾಹಕರು ನೇಮಕಾತಿ ಪತ್ರ ಪಡೆಯುವ ಮುನ್ನವೇ ಮುಷ್ಕರಕ್ಕೆ ಬೆಂಬಲ ನೀಡುತ್ತಿರುವುದರಿಂದ ಅವರ ಮನೆ ಮನೆಗೆ ಹೋಗಿ ನಾವು ನೋಟಿಸ್ ಅಂಟಿಸಿ ಬರುತ್ತಿದ್ದೇವೆ. ಅವರು ಮುಷ್ಕರವನ್ನು ಮುಂದುವರೆಸಿದರೆ ಅವರನ್ನ ಕೆಲಸದಿಂದ ವಜಾಗೊಳಿಸುವ ನಿರ್ಧಾರವನ್ನು ಸಾರಿಗೆ ಸಂಸ್ಥೆ ತೆಗೆದುಕೊಂಡ ಹಿನ್ನೆಲೆ ಈಗ ಕೆಲವರು ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದರು.