ಹಾಸನ: ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ವಿದ್ಯುನ್ಮಾನ ಮಾಧ್ಯಮ ನಿಷೇಧಿಸಿರುವುದನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿ ನಗರದಲ್ಲಿ ಶನಿವಾರ ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದಿಂದ ಮೌನ ಮೆರವಣಿಗೆ ನಡೆಸಿದ ಪತ್ರಕರ್ತರು, ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಮಹತ್ವದ ಸ್ಥಾನ ಹೊಂದಿವೆ. ಜನ ಸಾಮಾನ್ಯರ ಆಶೋತ್ತರ ಹಾಗೂ ನಾಡಿನ ಸರ್ವಾಂಗೀಣ ಅಭಿವೃದ್ಧಿ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸುವ ವಿಧಾನಮಂಡಲ ಕಲಾಪಗಳನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡುವುದಕ್ಕೆ ಅವಕಾಶ ಕಲ್ಪಿಸುವುದು ಸರಿಯಾದ ಕ್ರಮ. ಇದರಿಂದ ಕಲಾಪ ಇನ್ನಷ್ಟು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿ ನಡೆಯಲು ಸಾಧ್ಯವಾಗುತ್ತದೆ. ಆದರೆ, ಕಲಾಪಗಳಿಗೆ ಮಾಧ್ಯಮ ಕ್ಯಾಮರಾಗಳಿಗೆ ನಿರ್ಬಂಧ ವಿಧಿಸಿರುವುದು ಸರಿಯಾದ ಕ್ರಮ ಅಲ್ಲ ಎಂದರು.
ಅಗತ್ಯ ಇದ್ದರೆ ಸರ್ಕಾರ ಮಾಧ್ಯಮ ನೀತಿ ಸಂಹಿತೆ ರೂಪಿಸಬಹುದು. ಆದರೆ, ಯಾವುದೇ ಚರ್ಚೆ, ಅಭಿಪ್ರಾಯ ಪಡೆಯದೆ ಏಕಾಏಕಿ ನಿರ್ಬಂಧಿಸಿದ್ದು ಸರಿಯಲ್ಲ. ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ವಿದ್ಯುನ್ಮಾನ ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧ ಆದೇಶ ಹಿಂಪಡೆಯಬೇಕೆಂದು ಸಮಸ್ತ ಪತ್ರಕರ್ತರು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅವರ ಮೂಲಕ ಸಭಾಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಯಿತು.