ಹಾಸನ: ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡಿದರೆ ಎದುರಿಸುವ ಶಕ್ತಿ ನಮಗಿದೆ. ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಸುಮ್ಮನೆ ಕೂತಿದ್ದೀನಾ? ಯಡಿಯೂರಪ್ಪ ಏನು ಶಾಶ್ವತವಾಗಿ ಅಧಿಕಾರದಲ್ಲಿ ಇರ್ತಾರಾ? ನಾನು ಬದುಕಿದ್ದಾಗಲೇ ಹಾಸನದಲ್ಲಿ ತೋಟಗಾರಿಕೆ ಕಾಲೇಜು ತಂದೇ ತರುತ್ತೇನೆ. ದೇವೇಗೌಡನ ಮಗನಿಗೆ ಗೊತ್ತಿದೆ ದುಡ್ಡು ತರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಭೂಮಿ ಬಗ್ಗೆ ಸರ್ಕಾರ ತಂದಿರೋ ನೀತಿ ಕುರಿತು ಮಾತನಾಡಿ, ಸರ್ಕಾರ ರೈತರನ್ನು ಒಕ್ಕಲೆಬ್ಬಿಸೋ ನೀತಿ ಇದಾಗಿದೆ. ಸರ್ಕಾರ ಲ್ಯಾಂಡ್ ಮಾಫಿಯಾ ಜೊತೆಗೆ ಸೇರಿದೆ. ಇವೆಲ್ಲದರ ಬಗ್ಗೆ ಗಮನ ಕೊಡದ ಪ್ರಧಾನಿ ನರೇಂದ್ರ ಮೋದಿಯವರು ಕಣ್ಮುಚ್ಚಿ ಕುಳಿತಿದ್ದಾರೆ. ಈಗ ಬರೀ ಪಾಕಿಸ್ತಾನ, ಲಡಾಕ್ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ವಯಸ್ಸಾದ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಏತಕ್ಕೆ ಈ ಕೆಟ್ಟಾಲೋಚನೆ?. ಇಂತಹ ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದರು.
ಹೇಮಾವತಿ ನೀರಾವರಿ ಕಾಮಗಾರಿಯಲ್ಲಿ ಶೇ. 8ರಷ್ಟು ಹಣ ನೀಡಿದವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತಿದೆ ಎಂದು ದೂರಿದರು. ಮೋದಿಯವರು ನಮ್ಮ ಸರ್ಕಾರವನ್ನು ಎಂಟು ಪರ್ಸೆಂಟ್ ಸರ್ಕಾರ ಎಂದರು. ಈಗ ಏನು ಹೇಳ್ತಾರೆ ಎಂದು ಪ್ರಶ್ನೆ ಮಾಡಿದರು.