ಹಾಸನ : ಕುರಿ ಮೇಯಿಸಲು ಹೋಗಿ ತಮ್ಮ ಸಂಗಡಿಗರೊಂದಿಗೆ ಕಲಿತ ಜಾನಪದ ಗೀತೆಯಿಂದಲೇ ಪ್ರಖ್ಯಾತಿ ಪಡೆದಿದ್ದ ರಾಮೇಗೌಡ ( ಗ್ಯಾರಂಟಿ ರಾಮಣ್ಣ) ಎಂಬ ಹಳ್ಳಿ ಹಾಡುಗಾರನಿಗೆ ಕೊನೆಗೂ ಗೌರವ ಸಂದಿದೆ. ರಾಜ್ಯ ಸರ್ಕಾರ ಅವರ ಪ್ರತಿಭೆಯನ್ನು ಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಆಲದಹಳ್ಳಿ ಗ್ರಾಮದ ಸೋಮೇಗೌಡ ಮತ್ತು ಚಿಕ್ಕಮ್ಮ ದಂಪತಿಯ ಮಗನಾದ ಗ್ಯಾರಂಟಿ ರಾಮಣ್ಣ, 1980 ರಿಂದ ರೈತ ಸಂಘದ ಹಾಡುಗಳಿಂದ ಪ್ರಭಾವಿತರಾಗಿ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡರು. 1981 ರಲ್ಲಿ ಗ್ಯಾರಂಟಿ ರಾಮಣ್ಣ ಅವರ ಮೊದಲನೇ ಪುಸ್ತಕ ಹಾಗೂ ಕ್ಯಾಸೆಟ್ ಹಸಿರು ಧ್ವನಿಯನ್ನು ಹುಬ್ಬಳ್ಳಿಯಲ್ಲಿ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಬಿಡುಗಡೆ ಮಾಡಿದರು. ಅಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರೈತ ಗೀತೆ, ಜನಪದಗೀತೆ, ಅರಿವಿನಗೀತೆ, ಲಾವಣಿ, ಗೀಗೀಪದ ಮುಂತಾದ ಕಾರ್ಯಕ್ರಮಗಳನ್ನು ತಮ್ಮದೇ ಕಲಾ ತಂಡ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ.
1990 ರಲ್ಲಿ ಆರಂಭವಾದ ಭಾರತ ಜ್ಞಾನ ವಿಜ್ಞಾನ ಸಮಿತಿಯ 40 ದಿನದ ಕಲಾ ಜಾಥಾದಲ್ಲಿ ಜ.ಹೋ.ನಾರಾಯಣಸ್ವಾಮಿ ಹಾಗೂ ಹೆಚ್.ಆರ್ ಸ್ವಾಮಿಯವರ ನೇತೃತ್ವದಲ್ಲಿ ಬೀದಿ ನಾಟಕದ ನಾಯಕತ್ವ ಪಡೆದುಕೊಂಡ ಇವರು, ಇದುವರೆಗೂ ಅದನ್ನು ಬಿಡಲಾಗದೆ ಅಂಟಿಕೊಂಡಿದ್ದಾರೆ. ಅದರಲ್ಲಿ ಸಿಗುವ, ಸಿಕ್ಕಿರುವ ತೃಪ್ತಿ, ನೆಮ್ಮದಿ, ಹುರುಪು ಬೇರೆಲ್ಲೂ ಸಿಗಲ್ಲ ಎನ್ನುತ್ತಾರೆ. ಇದುವರೆಗೂ ನೂರಾರು ಬೀದಿ ನಾಟಕಗಳಿಗೆ ಬೇಕಾದ ಹಾಡುಗಳನ್ನು ರಚಿಸಿ ರಾಜ್ಯದ ಸಾವಿರಾರು ಕಲಾವಿದರಿಗೆ ತರಬೇತಿ ನೀಡಿ, ಅವರೆಲ್ಲರ ಒಡನಾಡಿಯಾಗಿದ್ದಾರೆ. 4000 ಕ್ಕೂ ಹೆಚ್ಚು ಬೀದಿ ನಾಟಕ ಕಲಾವಿದರನ್ನು ಹೊಂದಿರುವ, ಕರ್ನಾಟಕ ರಾಜ್ಯ ಬೀದಿ ನಾಟಕ ಒಕ್ಕೂಟದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದಾರೆ.
ರಾಮೇಗೌಡ ಹೋಗಿ "ಗ್ಯಾರಂಟಿ ರಾಮಣ್ಣ"ನಾದ್ರು : ಧಾರವಾಡದ ಒಂದು ಕಾರ್ಯಕ್ರಮದಲ್ಲಿ ಸಮಯವಾದರೂ ರಾಮಣ್ಣರ ತಂಡ ಆಗಮಿಸಿರಲಿಲ್ಲ. ಈ ವೇಳೆ ಕಾರ್ಯಕ್ರಮದ ಆಯೋಜಕರು, ರಾಮೇಗೌಡ ಬರುವುದು ಸಂಶಯ. ಬೇರೆ ಯಾರಾನ್ನಾದ್ರೂ ನೋಡಿ ಎನ್ನುತ್ತಿದ್ದಂತೆ, ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಅವರು ಕಾರ್ಯಕ್ರಮಕ್ಕೆ ಗ್ಯಾರಂಟಿಯಾಗಿ ಬಂದೇ ಬರ್ತಾರೆ ಎಂದು ಹೇಳುವಷ್ಟರಲ್ಲಿ ರಾಮಣ್ಣರ ತಂಡ ಕಾರ್ಯಕ್ರಮದ ವೇದಿಕೆಯಲ್ಲಿತ್ತಂತೆ. ಕಾರ್ಯಕ್ರಮದ ಬಳಿಕ ವೇದಿಕೆಯಲ್ಲೇ ಆಯೋಜಕರು ರಾಮೇಗೌಡರಿಗೆ ಗ್ಯಾರಂಟಿ ರಾಮಣ್ಣ ಎಂಬ ಬಿರುದು ನೀಡಿ ಸನ್ಮಾನಿಸಿದ್ದರಂತೆ. ಅಂದಿನಿಂದ ಅವರು ಗ್ಯಾರಂಟಿ ರಾಮಣ್ಣ ಎಂದು ಚಿರಪರಿಚಿತರಾಗಿದ್ದಾರೆ. ರಾಮೇಗೌಡ, ಗ್ಯಾರಂಟಿ ರಾಮಣ್ಣ ಎಂದು ಬದಲಾಯಿಸಿಕೊಂಡು ಎಲ್ಲಾ ದಾಖಲಾತಿಗಳನ್ನು ಅದೇ ಹೆಸರಿಗೆ ಮಾರ್ಪಾಡು ಮಾಡಿಸಿಕೊಂಡಿದ್ದಾರೆ.
ನಾಲ್ಕು ದಶಕಗಳ ನಿರಂತರ ಶ್ರಮಕ್ಕೆ ಜಯ : ಈವರೆಗೆ 500ಕ್ಕೂ ಹೆಚ್ಚು ಗೀತೆಗಳು, 50ಕ್ಕೂ ಹೆಚ್ಚು ನಾಟಕಗಳು, 30ಕ್ಕೂ ಹೆಚ್ಚು ರೂಪಕಗಳು ಹಾಗೂ 50 ಧ್ವನಿ ಸುರುಳಿಗಳನ್ನು ಗ್ಯಾರಂಟಿ ರಾಮಣ್ಣ ಬಿಡುಗಡೆಗೊಳಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ನೀಡಿರುವ ಇವರು, ಪ್ರಗತಿ ಗ್ರಾಮೀಣ ತರಬೇತಿ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿ ಮನೆ ಮಾತಾಗಿದ್ದಾರೆ.
ಸಂಘ ಸಂಸ್ಥೆಗಳು, ಶಾಲಾ ಕಾಲೇಜು, ಯುವಕ, ಯುವತಿ ಮಂಡಳಿಗಳು ಹಾಗೂ ಆಸಕ್ತ ಕಲಾತಂಡಗಳಿಗೆ ಕಲಾ ಪ್ರಕಾರಗಳ ಬಗ್ಗೆ ತರಬೇತಿ ನೀಡುತ್ತಿದ್ದು, ಜನಪದ, ಪರಿಸರ, ಭಾವೈಕ್ಯತೆ, ಮಹಿಳಾ ಸಬಲೀಕರಣ, ಆರೋಗ್ಯ ಕುರಿತು ಹಾಡು, ನಾಟಕ ರಚಿಸಿ ಹಲವಾರು ತಂಡಗಳಿಗೆ ತರಬೇತಿ ನೀಡಿ, ರಾಜ್ಯಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ.
ಒಲಿದು ಬಂದ ಪ್ರಶಸ್ತಿಗಳು : 1988- ಮಂಡ್ಯದಲ್ಲಿ ರೈತ ಮಿತ್ರ ಪ್ರಶಸ್ತಿ, ತುಮಕೂರಿ ಸಾಕ್ಷರ ಮಿತ್ರ ಸೇವಾ ಪ್ರಶಸ್ತಿ, 1990- ಲಕ್ನೋದಲ್ಲಿ ಕಲಾ ಜ್ಯೋತಿ ಪ್ರಶಸ್ತಿ 1999- ಹಾಸನದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2014- ಬೆಂಗಳೂರಿನಲ್ಲಿ ಜ್ಞಾನವಿಜ್ಞಾನ ಪ್ರಶಸ್ತಿ, 2014- ವಿಜಯಪುರದಲ್ಲಿ ಜಾನಪದ ಪ್ರಪಂಚ ಪ್ರಶಸ್ತಿ, 2018- ಬಳ್ಳಾರಿಯಲ್ಲಿ ಕಾವ್ಯ ವಾಹಿನಿ ಪ್ರಶಸ್ತಿ, 2018- ರಾಜ್ಯ ಕಾಯಕ ಮಾಣಿಕ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಪ್ರಶಸ್ತಿ, ಗೌರವಗಳಿಗೆ ಗ್ಯಾರಂಟಿ ರಾಮಣ್ಣ ಭಾಜನರಾಗಿದ್ದಾರೆ.
ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ರಾಮಣ್ಣ, ನನಗೆ ಅಕಾಡೆಮಿ ಪ್ರಶಸ್ತಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಶಿಷ್ಯಂದಿರ ಹಾಗೂ ಗೆಳೆಯರ ಬಳಗದ ಆಶಯವಾಗಿತ್ತು. ಸರ್ಕಾರ ನನಗೆ ಕೊಟ್ಟಿರುವುದು ತುಂಬಾ ಸಂತೋಷವಾಗಿದೆ. ನನಗಿಂತಲೂ, ನನ್ನ ಮಗ ಹೆಚ್ಚು ಸಂತೋಷಪಡುತ್ತಿದ್ದ, ಆದ್ರೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದರಿಂದ ಆ ನೋವು ನನ್ನನ್ನು ಕಾಡುತ್ತಿದ್ದೆ. ಈ ಪ್ರಶಸ್ತಿ ನನ್ನ ಶಿಷ್ಯಂದಿರ ತಂಡಕ್ಕೆ ಸೇರಬೇಕು. ಅವರುಗಳೇ ನನಗೆ ಸ್ಪೂರ್ತಿ ಎಂದಿದ್ದಾರೆ.
ಜಾನಪದ ಎನ್ನುವುದು ಜನರಿಂದ ಜನರ ಬಾಯಿಗೆ ಬರುವಂತದ್ದು. ಪಾಶ್ಚಿಮಾತ್ಯ ಸಂಗೀತಕ್ಕೆ ನೂರಾರು ತರಹದ ವಾದ್ಯಗೋಷ್ಠಿ ಮತ್ತು ವೃಂದಬೇಕು. ಆದ್ರೆ, ಜಾನಪದ ಹಾಡಿಗೆ ಕೈಯಲ್ಲಿ ಒಂದು ತಮಟೆಯಿದ್ದರೆ ಸಾಕು. ಎಲ್ಲಿ ಬೇಕಾದರೂ ಹಾಡಬಹುದು. ದಕ್ಷಿಣ ಆಫ್ರಿಕಾಕ್ಕೆ ಹೋದ ವೇಳೆ, ಕೈಯಲ್ಲಿ ತಮಟೆ ಹಿಡಿದು ಹಾಡಿದ ಕನ್ನಡದ ಜಾನಪದ ಹಾಡಿಗೆ, ನೆಲ್ಸನ್ ಮಂಡೇಲರು ಮೆಚ್ಚಿ ಗೌರವಿಸಿದ್ದರು, ಅದು ಎಂದು ಮರೆಯಲಾಗದು ಎಂದು ಹೇಳಿದ್ದಾರೆ.