ಹಾಸನ: ಅನೈತಿಕ ಸಂಬಂಧದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಹಂದ್ರಾಳು ಸಮೀಪದ ಗುಡ್ಡದ ಕೆಂಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕೃಷ್ಣಪ್ಪ (45) ಕೊಲೆ ಮಾಡಿ ಜಾವಗಲ್ ಪೊಲೀಸರಿಗೆ ಶರಣಾಗಿರುವ ಆರೋಪಿ. ಮಂಜು (28) ಮತ್ತು ಗಂಗಪ್ಪ (70) ಕೊಲೆಯಾದ ಅಪ್ಪ ಮಕ್ಕಳು. ಆರೋಪಿಯ ಪತ್ನಿಯೊಂದಿಗೆ ಕೊಲೆಯಾದ ಮಂಜು ಅನೈತಿಕ ಸಂಬಂಧನು ಇಟ್ಟುಕೊಂಡಿದ್ದ ಅಷ್ಟೆಯಲ್ಲದೇ ಆಕೆಯೊಂದಿಗೆ ಸರಸ ಸಲ್ಲಾಪವಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೃಷ್ಣಪ್ಪನಿಗೆ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಕಳೆದವಾರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಎರಡೂ ಕುಟುಂಬದವರು ಒಮ್ಮತದ ತೀರ್ಮಾನ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಮಂಜು ಹಣದ ಆಸೆಗೆ ಬಿದ್ದು, ಪದೇಪದೇ ಕೃಷ್ಣಪ್ಪನಿಗೆ ಕೊಡುತ್ತಿದ್ದ ಹಿಂಸೆಯನ್ನು ತಾಳಲಾರದೇ ಹಣ ಕೊಡುವುದಾಗಿ ಹೇಳಿ ಮಂಜುನನ್ನು ತೋಟದ ಮನೆಗೆ ಕರೆಸಿಕೊಂಡು ಮರದ ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡುವ ವೇಳೆ ಅಡ್ಡಬಂದ ಗಂಗಪ್ಪನನ್ನ ಕೂಡ ಕೃಷ್ಣಪ್ಪ ಕೊಲೆ ಮಾಡಿದ್ದಾನೆ. ಮರ್ಡರ್ ಮಾಡಿದ ಬಳಿಕ ಇಬ್ಬರ ಮೃತದೇಹಗಳನ್ನು ತೆಂಗಿನ ಗರಿಯಿಂದ ಮುಚ್ಚಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಕೃಷ್ಣಪ್ಪ ಮತ್ತು ಗಂಗಪ್ಪ ಇಬ್ಬರು ಸಹೋದರ ಸಂಬಂಧಿಗಳು. ಕೊಲೆಗೆ ಕೇವಲ ಅನೈತಿಕ ಸಂಬಂಧ ಒಂದೇ ಕಾರಣವಲ್ಲ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಕೊಲೆಯ ಸಂದರ್ಭದಲ್ಲಿ ಕೃಷ್ಣಪ್ಪನ ಮನೆಯ ಇತರ ಮೂರು ಜನ ಸದಸ್ಯರು ಕೂಡ ಸೇರಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಶರಣಾಗಿರುವ ಕೃಷ್ಣಪ್ಪನನ್ನ ಪೊಲೀಸರು ವಶಕ್ಕೆ ಪಡೆದು ಕೊಲೆಯಾದ ಮಂಜು ಮತ್ತು ಗಂಗಪ್ಪ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.