ಹಾಸನ: ದಿನದಿಂದ ದಿನಕ್ಕೆ ಪೆಟ್ರೋಲ್,ಡೀಸೆಲ್ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರ ಜೀವನದ ಮೇಲೆ ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಇಂದು ಮಂಡಿಸಲಿರುವ ಬಜೆಟ್ ಮೇಲೆ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಬಜೆಟ್ನಲ್ಲಿ ಮಂಡಿಸಲಾಗಿದ್ದ ಸಾಕಷ್ಟು ಯೋಜನೆಗಳ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಈ ಬಾರಿಯ ಬಜೆಟ್ನಲ್ಲಿಯಾದರೂ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಾರೆ ಎಂಬ ನೀರೀಕ್ಷೆಯಲ್ಲಿದ್ದಾರೆ.
ಹಾನಸ ಜಿಲ್ಲೆಯ ಜನತೆಯ ನಿರೀಕ್ಷೆಗಳಿವು:
- ವಿಮಾನನಿಲ್ದಾಣ, ಹೊಸ ಬಸ್ ನಿಲ್ದಾಣದ ಸಮೀಪ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ನಿರ್ಮಾಣಕ್ಕೆ ಅನುದಾನ
- ನಗರ ಸಾರಿಗೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ತ್ವರಿತಗತಿಗೆ ಹೊಸ ಯೋಜನೆ
- ರಣಘಟ್ಟ ನೀರಾವರಿ ಯೋಜನೆ, ಕಾಚೇನಹಳ್ಳಿ ಏತ ನೀರಾವರಿ, ಎತ್ತಿನಹೊಳೆ ಯೋಜನೆಗೆ ಚಾಲನೆ
- ಸಕಲೇಶಪುರ, ಆಲೂರು ಹಾಗೂ ಬೇಲೂರು ಭಾಗದಲ್ಲಿ ನಿತ್ಯ ಕಾಡಾನೆಗಳ ನಿಯಂತ್ರಣಕ್ಕೆ ಆನೆ ಕಾರಿಡಾರ್ ಅಥವಾ ಆನೆಧಾಮ ನಿರ್ಮಾಣ
- ಗ್ರಾಮೀಣ ಭಾಗದ ರಸ್ತೆ ನಿರ್ಮಾಣ, ಸಕಲೇಶಪುರ - ಹಾಸನ ನಡುವಿನ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಮರುಚಾಲನೆ.
ಇದಲ್ಲದೇ ಕೃಷಿ ಯೋಜನೆ, ಕೈಗಾರಿಕೆ ಸ್ಥಾಪನೆಯ ಜೊತೆಗೆ ಉದ್ಯೋಗ ಸೃಷ್ಟಿ ಕಲ್ಪಿಸುವ ನಿಟ್ಟಿನಲ್ಲಿ ಹಾಸನದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಯೋಜನೆಗೂ ಸರ್ಕಾರ ಹೊತ್ತು ಕೊಡಬಹುದೆಂಬ ನಿರೀಕ್ಷೆಯನ್ನು ಜಿಲ್ಲೆಯ ಜನ ಹೊತ್ತಿದ್ದಾರೆ. ತುಮಕೂರು ಸ್ಮಾರ್ಟ್ ಸಿಟಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದ್ದು, ಹಾಸನವು ಕೂಡ ಒಂದು ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರವಾಸಿತಾಣ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಕೊಡುವಂತಹ ನೂತನ ಯೋಜನೆಗಳನ್ನು ಜಿಲ್ಲೆಗೆ ನೀಡಿ ಈ ಭಾಗದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಶೀತಲೀಕರಣಗಾರವನ್ನು ನಿರ್ಮಾಣ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿದೆ.