ಹಾಸನ: ಯಾವ ಸದಸ್ಯರನ್ನೂ ಗಣನೆಗೆ ತೆಗೆದುಕೊಳ್ಳದೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜು ಅವರು ಮನಸೋಯಿಚ್ಛೆ ಕೆಲಸ ಮಾಡುತ್ತಿದ್ದಾರೆ ಎಂದು ಜಿಪಂ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಅಸಮಧಾನ ಹೊರ ಹಾಕಿದ್ದಾರೆ.
ತಮ್ಮ ಕಛೇರಿಯಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಜಿಡಿಎಸ್ ಜಿಪಂ ಸದಸ್ಯರು ಸಾಮನ್ಯ ಸಭೆಗೆ ಬರುತ್ತಿಲ್ಲ, ದಲಿತ ಮಹಿಳೆ ಎಂದು ಕಡೆಗಣಿಸುತ್ತಿದ್ದಾರೆ ಎಂದು ಶ್ವೇತಾ ದೇವರಾಜು ದೂರಿದ್ದಾರೆ. ಆದ್ರೆ ಅವರೇ ಸ್ವಯಿಚ್ಚೆಯಂತೆ ಜಿಪಂ ಅನುದಾನಗಳನ್ನು ಬಳಸಿಕೊಂಡು ಸದಸ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸ್ವರೂಪ್ ಆರೋಪಿಸಿದರು.
ವಿಧಾನಸಭಾ ಕಲಾಪ ನಡೆಯುತ್ತಿರುವುದು ತಿಳಿದಿದ್ದರು ಕೂಡಾ ಶ್ವೇತಾ ಅವರು ಶಾಸಕರು, ಸಂಸದರ ಅನುಪಸ್ಥಿತಿಯಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಡಿಡಬ್ಲುಎಸ್ಎಂ ಸಭೆ ಕರೆದು 1 ಕೋಟಿ ರೂ. ಅನುಮೊದನೆಗೆ ಪ್ರಸ್ತಾಪ ಮಂಡಿಸಿದ್ದಾರೆ. ಅದರ ನೋಟಿಸ್ ಸಹಾ ಒಂದು ದಿನದ ಮುಂಚೆ ನೀಡಿದ್ದು, ಇದರ ಹಿಂದಿನ ಉದ್ದೇಶ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವತಃ ಅವರ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಅಧ್ಯಕ್ಷರು ಹೀಗೆ ತಮ್ಮ ಸ್ವಇಚ್ಚೆಯಂತೆ ಕೆಲಸ ಮಾಡುವುದೇ ಹೋದರೆ ಮುಂದಿನ ಸಭೆಗಳಿಗೆ ನಾವು ಹಾಜರಾಗುವುದಿಲ್ಲ ಎಂದು ಸ್ವರೂಪ್ ಎಚ್ಚರಿಸಿದರು.
ಅಲ್ಲದೆ ಜಿಲ್ಲಾ ಪಂಚಾಯತ್‌ನಲ್ಲಿ ಅಳವಡಿಸಿರುವ ಲಿಫ್ಟ್ ಕಾಮಗಾರಿಯನ್ನು ಅಧ್ಯಕ್ಷರು ಅವರ ಕುಟುಂಬದವರಿಗೆ ಅಂದಾಜು 25 ಲಕ್ಷ ರೂ. ಗೆ ಗುತ್ತಿಗೆ ನೀಡಿದ್ದಾರೆ. ದೇವರಾಜು ಅಣ್ಣನವರದೊಂದು ಲಿಫ್ಟ್ ಕಂಪನಿ ಇದ್ದು, ಸರಿಯಾಗಿ ಕಾಮಗಾರಿ ಮಾಡದೇ ಅನೇಕ ಬಾರಿ ಕೆಟ್ಟು ನಿಂತು ತೊಂದರೆಯಾಗಿದೆ. ಈ ಬಗ್ಗೆ ಕೂಡಲೇ ತನಿಖೆ ಮಾಡುವಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು.