ಹಾಸನ: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ಪ್ರೋತ್ಸಾಹಿಸುವವರ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಇದನ್ನು ಪ್ರೋತ್ಸಾಹಿಸುವ ಅಥವಾ ಒತ್ತಾಯಪೂರ್ವಕವಾಗಿ ಮದುವೆ ನಡೆಸುವ ಪೋಷಕರ ಮೇಲೆ ಹಾಗೂ ಒಂದು ವೇಳೆ ಹುಡುಗ ಪ್ರಾಪ್ತ ವಯಸ್ಸಿನವನಾಗಿದ್ದರೆ ಅವನ ಮೇಲೂ ಸಹ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 18 ಬಾಲ್ಯ ವಿವಾಹಗಳು ನಡೆದಿದ್ದು, ಇನ್ನೂ ಸಹ ಕೆಲ ದೂರು ದಾಖಲಾಗಿಲ್ಲ. ಕೂಡಲೇ ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಎಂದು ತಿಳಿಸಿದರು.
ಜಿಲ್ಲಾ ನಿರೂಪಣಾಧಿಕಾರಿ ಎ.ಟಿ.ಮಲ್ಲೇಶ್ ಮಾತನಾಡಿ, ಬಾಲ್ಯ ವಿವಾಹ ಜರುಗಿರುವ ಬಗ್ಗೆ ದೂರು ಬಂದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಸಹ ಕುಟುಂಬದವರಿಂದ ವಿವಾಹ ನಡೆದಿರುವ ಬಗ್ಗೆ ಯಾವುದೇ ದಾಖಲೆಗಳು ದೊರೆಯುವುದಿಲ್ಲ. ಅಲ್ಲದೇ ಸ್ಥಳೀಯರು ಕೂಡ ಯಾವುದೇ ರೀತಿಯ ಸಹಕಾರ ನೀಡುವುದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.