ಹಾಸನ/ಅರಸೀಕೆರೆ : ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿಯೇ ಓದಿದ ಯುವಕನೊಬ್ಬ ಈ ಯುಪಿಎಸ್‌ಸಿ ಪರೀಕ್ಷೆಯಲ್ಲಿ 48ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅರಸೀಕೆರೆ ತಾಲೂಕಿನ ಚಗಚಗೆರೆ ಗ್ರಾಮದ ಜಿ ಪುಪ್ಪ ಮತ್ತು ಪುರುಶೋತ್ತಮ ಎಂಬ ದಂಪತಿ ಮಗ ಗೌತಮ್ ಎಂಬ ಯುವಕ ಈ ಸಾಧನೆ ಮಾಡಿದ್ದಾರೆ. ಚಿಕ್ಕವಯಸ್ಸಿನಿಂದಲೇ ಕಾರುಗಳನ್ನ ಡಿಸೈನ್ ಮಾಡಬೇಕೆಂಬ ಕನಸ್ಸನ್ನು ಕಟ್ಟಿಕೊಂಡಿದ್ದರಂತೆ ಗೌತಮ್. ಈ ಕನಸಿಗೆ ನೀರೆರೆದು 2015ರಲ್ಲಿ ಮೆಕ್ಯಾನಿಕ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಸ್ವಲ್ಪ ದಿನ ವಿದೇಶದಲ್ಲಿಯೂ ಕೆಲಸ ಮಾಡಿದ್ದಾರೆ.
2016ರಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲವಾದರೂ, ಧೃತಿಗೆಡದೆ ಛಲದಿಂದ ಓದಿ ಕೊನೆಗೂ ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ)ದಿಂದ ನೀಡುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ದೇಶಕ್ಕೆ 48ನೇ ಸ್ಥಾನ ಪಡೆದಿದ್ದಾರೆ.
ಭಾರತದ ಗೃಹ ಸಚಿವಾಲಯದ ಅಧಿಕಾರದಲ್ಲಿರುವ ಐದು ಭದ್ರತಾ ಪಡೆಗಳಾದ ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಐಟಿಬಿಪಿ, ಹಾಗೂ ಸಶಸ್ತ್ರ ಗಡಿ ಪಡೆ (ಎಸ್ಎಸ್ಬಿ), ಈ ಐದು ಇಲಾಖೆಯಲ್ಲಿ ಯಾವುದಾದ್ರು ಒಂದು ಇಲಾಖೆಯಲ್ಲಿ ಇವರಿಗೆ ಉನ್ನತ ಹುದ್ದೆ ನೀಡಲಾಗುತ್ತದೆ.
ಓದಿ : ಮಂಗಳನಲ್ಲಿ ರೋವರ್ ಲ್ಯಾಂಡಿಂಗ್: ಭಾರತೀಯ ಮೂಲದ ವಿಜ್ಞಾನಿಯ ಮಹತ್ವದ ಪಾತ್ರ
ತಮ್ಮ ಈ ಸಾಧನೆಗೆ ತಮ್ಮ ತಂದೆಯೇ ಸ್ಫೂರ್ತಿ ಅಂತಾರೆ ಗೌತಮ್. ಹಾಗಾಗಿ, ಪದವಿ ಮುಗಿದ ಬಳಿಕ ಯುಪಿಎಸ್‌ಸಿ ತರಬೇತಿಗೆ ದೆಹಲಿಗೆ ತೆರಳಿದ್ದರು. ನಿವೃತ್ತ ಜಂಟಿ ನಿರ್ದೇಶಕರಾಗಿರೋ ಗುಡ್ಡೇಗೌಡರ ಸಹಾಯದಿಂದ 2017ರಲ್ಲಿ ಸಿಎಪಿಎಫ್ ಪರೀಕ್ಷೆ ಬರೆದು ವಿಫಲರಾಗಿದ್ದರು.
ನಂತರ 2019ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ ಕೊರೊನಾ ಇದ್ದ ಕಾರಣ ಫಲಿತಾಂಶ ವಿಳಂಬವಾಗಿತ್ತು. ಕಳೆದ ವಾರ ಪರೀಕ್ಷೆ ಫಲಿತಾಂಶ ಬಂದಿದ್ದು, 48ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.