ಹಾಸನ: ಸಾಫ್ಟ್‌ವೇರ್ ಯುವಕರ ಮಾಸ್ಟರ್ ಪ್ಲಾನ್‌ನಿಂದಾಗಿ 15 ಜನ ಬಡ ಮಹಿಳೆಯರಿಗೆ ಕೆಲಸ ಸಿಕ್ಕಿರುವುದರ ಜೊತೆಗೆ ಅರಸೀಕೆರೆ ನಗರಸಭೆಗೆ ಸುಮಾರು ಹತ್ತು ಸಾವಿರದಷ್ಟು ಮಾಸ್ಕ್ ಪೂರೈಕೆಯಾಗಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅರಸೀಕೆರೆ ಮೂಲದ ಕಿರಣ್, ಶಶಿಧರ್, ಪ್ರದೀಪ್, ಪವಿತ್ರ, ಕಾವ್ಯ ಎಂಬ 5 ಜನ ಯುವಕ, ಯುವತಿಯರು, ಕೊರೊನಾ ಎಫೆಕ್ಟ್ ಹಿನ್ನೆಲೆ ವರ್ಕ್ ಫ್ರಮ್ ಹೋಂ ಮಾಡಲು ಊರಿಗೆ ವಾಪಸ್ ಆಗಿದ್ದರು. ಈ ವೇಳೆ ಸ್ಥಳೀಯವಾಗಿ ಮಾಸ್ಕ್‌ಗೆ ಸಮಸ್ಯೆ ಇರುವುದು ಮತ್ತು ಹೊಲಿಗೆ ಕೆಲಸ ಮಾಡುತ್ತಿದ್ದ ಮಹಿಳೆಯರ ಆರ್ಥಿಕ ಸಮಸ್ಯೆಯನ್ನು ಗಮನಿಸಿದ್ದಾರೆ.
ಈ ನಿಟ್ಟಿನಲ್ಲಿ ಜನರಿಗೆ ಮತ್ತು ಮಹಿಳೆಯರಿಗೆ ಸಹಾಯವಾಗಲಿ ಅಂತ ವಿಂಗ್ಸ್ ಎನ್‌ಜಿಒ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅರಸೀಕೆರೆ ನಗರಸಭೆ ಅಧಿಕಾರಿಗಳನ್ನು ಭೇಟಿ ಮಾಡಿ 8 ರೂ.ಗೆ ಮಾಸ್ಕ್ ಹೊಲಿಸಿ ಕೊಡುವುದಾಗಿ ಮನವಿ ಮಾಡಿ ಒಪ್ಪಿಗೆ ಪಡೆದುಕೊಂಡಿದ್ದಾರೆ.
ಹೊಲಿಗೆ ಕೆಲಸ ಕಲಿತ ಮಹಿಳೆಯರಿಗೆ ಸ್ವತಃ ತಾವೇ ಕಚ್ಚಾ ವಸ್ತು ಪೂರೈಕೆ ಮಾಡಿ ಮಾಸ್ಕ್ ಹೊಲಿಸಿದ್ದಾರೆ. ಪ್ರತಿ ಒಂದು ಮಾಸ್ಕ್ ತಯಾರಿಸಲು 8 ರೂಪಾಯಿ ವೆಚ್ಚ ತಗಲುತ್ತಿದ್ದು, ಯಾವುದೇ ಲಾಭ ಪಡೆಯದೆ ಅರಸೀಕೆರೆ ನಗರಸಭೆಗೆ ಮಾಸ್ಕ್ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ತಮ್ಮ ಮನೆಯಲ್ಲೇ ಕುಳಿತು ದಿನವೊಂದಕ್ಕೆ ಸುಮಾರು 800 ರಿಂದ 1 ಸಾವಿರ ರೂ. ಸಂಪಾದನೆ ಮಾಡುವಂತಾಗಿದೆ.
ಆಫೀಸ್ ಕೆಲಸದ ಜೊತೆಗೆ ಮಾಸ್ಕ್ ಸಮಸ್ಯೆ ಬಗೆಹರಿಸಲು ಮತ್ತು ಮಹಿಳೆಯರ ಆರ್ಥಿಕ ಸಮಸ್ಯೆಗೆ ನೆರವಾಗಲು ಮುಂದಾದ ಸಾಫ್ಟ್‌ವೇರ್ ಇಂಜಿನಿಯರ್‌ಗಳ ಪ್ಲಾನ್ಗೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.