ಹಾಸನ : ಬಹು ನಿರೀಕ್ಷಿತ ಹಾಸನದ ವಿಮಾನ ನಿಲ್ದಾಣದ ಕಾಮಗಾರಿ 2023 ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಂಡು ವಿಮಾನ ಹಾರಾಟ ಆರಂಭಿಸಲಿದೆ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ಶೈಲೇಂದ್ರ ಕೆ. ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಸಮೀಪ ಬೂವನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಗಳ ವೀಕ್ಷಣೆ ಮಾಡಿ ಕೆ.ಎಸ್.ಐ.ಐ.ಡಿ.ಸಿ. ಅಧಿಕಾರಿಗಳ ಸಭೆ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನದ ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಮೂಲಸೌಕರ್ಯ ಸಚಿವರಾದ ವಿ. ಸೋಮಣ್ಣ ಅವರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲ ನಿಲ್ದಾಣ ಕಾಮಗಾರಿ ವೀಕ್ಷಣೆ ಬಳಿಕ ಜಿಲ್ಲೆಯ ವಿಮಾನ ನಿಲ್ದಾಣಗಳ ಕಾಮಗಾರಿ ಅಭಿವೃದ್ಧಿ ಪರಿಶೀಲನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಹಾಸನದ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆಗೆ ಬಂದಿದ್ದು, ಸಕಾರಾತ್ಮಕವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಮಾಡಲು 5.13 ಎಕರೆ ಜಮೀನಿನ ಹೆಚ್ಚುವರಿ ಅವಶ್ಯಕತೆ ಇದ್ದು, ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭೂ ಮಾಲೀಕರೊಂದಿಗೆ ಮಾತುಕತೆ ಫಲಪ್ರದವಾಗಿದೆ. ಇತರ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ 193 ಕೋಟಿ ರೂ.ಗಳು ಈಗಾಗಲೇ ಬಿಡುಗಡೆಯಾಗಿದ್ದು, 30ರಷ್ಟು ಕಾಮಗಾರಿ ಪೂರ್ಣವಾಗಿದೆ. ರಸ್ತೆ ಸಂಪರ್ಕ ಸೇರಿದಂತೆ ಇತರೆ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ 70 ಕೋಟಿ ರೂ.ಗಳು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡರೆ ಪ್ರವಾಸೋದ್ಯಮ ಬೆಳವಣಿಗೆ ಆಗಲಿದೆ ಹಾಗೂ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಸಂಪರ್ಕ ಸೇತುವಾಗಿ ನಿಲ್ದಾಣ ಅಭಿವೃದ್ಧಿಯಾಗಲಿದೆ. ಬೀದರ್ ಹಾಗೂ ಗುಲ್ಬರ್ಗ ಮಾದರಿಯಲ್ಲಿಯೇ ಹಾಸನದಲ್ಲಿಯೂ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ ಅವರು, ಇದರಿಂದ ಹಾಸನ ಚಿಕ್ಕಮಗಳೂರು, ಮಂಡ್ಯ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಬಹು ನಿರೀಕ್ಷಿತ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲು ಅವಶ್ಯಕವಾಗಿ ಬೇಕಾಗಿರುವ 5.13 ಎಕರೆ ಭೂಮಿಗೆ ಪ್ರತಿ ಎಕರೆಗೆ 1.20 ಕೋಟಿ ರೂ.ಗಳ ಹಣ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಪಿಟಿಸಿಎಲ್ ಲೈನ್ ಬದಲಾವಣೆ ಹಾಗೂ ನಿಲ್ದಾಣಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಸಂಬಂಧ ಈಗಾಗಲೇ ಮಾತುಕತೆ ಅಂತಿಮವಾಗಿದ್ದು, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್, ಉಪವಿಭಾಗಧಿಕಾರಿ ಬಿ.ಎ. ಜಗದೀಶ್ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಮೈಸೂರು ಏರ್ಪೋರ್ಟ್ ಇನ್ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ