ಹಾಸನ: ಸಿಡಿಲು ತಾಗಿದ ಪರಿಣಾಮ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಕಳೆದ ನಾಲ್ಕು ದಿನದಿಂದ ನಿರಂತರವಾಗಿ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಇಂದು ಬಡಿದ ಸಿಡಿಲಿನಿಂದ ಇವತ್ತು ತೆಂಗಿನ ಮರವೊಂದು ಸುಟ್ಟು ಕರಕಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಕಡೇನಹಳ್ಳಿ ಗ್ರಾಮದಲ್ಲಿ ಇಂಥದೊಂದು ಘಟನೆ ಸಂಭವಿಸಿದೆ.
![ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನಮರ](https://etvbharatimages.akamaized.net/etvbharat/prod-images/kn-hsn-03-sidilu-av-7203289-hd_24052020220810_2405f_1590338290_137.jpg)
ಗ್ರಾಮದ ಮಂಜು ಎಂಬುವವರಿಗೆ ಸೇರಿದ ತೆಂಗಿನ ಮರ ಇದಾಗಿದ್ದು, ಇಂದು ರಾತ್ರಿ 7 ಗಂಟೆ ಸಂದರ್ಭದಲ್ಲಿ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಮರವನ್ನ ಸಂಪೂರ್ಣ ಆವರಿಸಿಕೊಂಡಿತ್ತು.
ಹೋಬಳಿಯ ಹಲವು ಭಾಗಗಳಲ್ಲಿ ಸುಮಾರು 1 ಗಂಟೆಗಳ ಕಾಲ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಪ್ರತಿನಿತ್ಯ ಸುರಿಯುತ್ತಿರುವ ಮಳೆ ಭಾರೀ ಬಿರುಗಾಳಿಯಿಂದ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 6ಕ್ಕೂ ಅಧಿಕ ಮನೆಗಳ ಮೇಲೆ ತೆಂಗಿನ ಮರ ಬಿದ್ದು ಲಕ್ಷಾಂತರ ರೂ. ಮೌಲ್ಯದ ಹಾನಿಯುಂಟಾಗಿದೆ.