ಹಾಸನ: ''ಹಾಸನದ ಅಧಿ ದೇವತೆ ಹಾಸನಾಂಬೆ ದೇವಿ ದರ್ಶನವು ಈ ವರ್ಷ ನವೆಂಬರ್ 2 ರಿಂದ 15ರ ವರೆಗೆ ತೆರೆಯಲಾಗುವುದು'' ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾಹಿತಿ ನೀಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಈ ಬಾರಿ ನ. 2 ರಿಂದ 15ನೇ ದಿನಾಂಕದವರೆಗೆ ಅಂದರೆ, 14 ದಿನಗಳ ಕಾಲ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಬಾಗಿಲು ತೆರೆಯಲಾಗುವುದು. ಅದರಲ್ಲಿ ಮೊದಲ ದಿವಸ ಮತ್ತು ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಉಳಿದಂತೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುವುದು'' ಎಂದರು.
ಹೆಚ್ಚು ಭಕ್ತರು ಬರುವ ನಿರೀಕ್ಷೆ, ಅಚ್ಚುಕಟ್ಟು ವ್ಯವಸ್ಥೆ: ''ಗಣ್ಯಾತಿಗಣ್ಯರು ಪಾಸ್ ಮೂಲಕ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಯಾವುದೇ ಗೊಂದಲ ಇಲ್ಲದಂತೆ ಇನ್ನಷ್ಟು ಚರ್ಚೆ ಮಾಡಲಾಗುವುದು. ದೇವಸ್ಥಾನದ ದುರಸ್ತಿ ಕಾರ್ಯಗಳನ್ನು ನಿರ್ವಹಿಸಲಾಗುವುದು. ಈ ಬಾರಿ ಶಕ್ತಿ ಯೋಜನೆಯಿಂದ ಹಾಸನಾಂಬೆ ದರ್ಶನಕ್ಕೆ ಹೆಚ್ಚು ಜನ ಭಕ್ತರು ಬರುವ ನಿರೀಕ್ಷೆಯಿದೆ. ಅದನ್ನು ಗಮನದಲ್ಲಿಟ್ಟುಕೊಂಡು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಲಾಗುವುದು'' ಎಂದು ತಿಳಿಸಿದರು.
ಪ್ರವಾಸೋದ್ಯಮ ಒತ್ತು- ಜಿಲ್ಲಾಧಿಕಾರಿ: ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಹಾಸನ ಎಂದರೆ ಶಿಲ್ಪಕಲೆಗಳ ತವರೂರು. ಪ್ರವಾಸೋದ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಕೊಟ್ಟು ಹಾಸನಾಂಬೆ ಮೂಲಕ ಹೆಚ್ಚು ಪ್ರವಾಸಿಗರನ್ನು ಸೆಳೆಯಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಆರ್ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ ಟಿ ಶಾಂತಲಾ, ಉಪ ವಿಭಾಗಾಧಿಕಾರಿ ಮಾರುತಿ ಇದ್ದರು.
12ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ: ಹಾಸನಾಂಬೆ ದೇವಿ ದೇವಸ್ಥಾನವು ಪವಾಡಗಳು ಹಾಗೂ ದಂತಕಥೆಗಳನ್ನು ಒಳಗೊಂಡಿದೆ. ಈ ಪುರಾತನ ದೇವಸ್ಥಾನವು ಬೆಂಗಳೂರಿನಿಂದ ಸುಮಾರು 180 ಕಿಲೋ ಮೀಟರ್ ದೂರದಲ್ಲಿರುವ ಹಾಸನ ನಗರದಲ್ಲಿದೆ. ಈ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.
ವರ್ಷಕ್ಕೊಮ್ಮೆ ತೆರೆಯುವ ದೇವಸ್ಥಾನದ ಬಾಗಿಲು: ಈ ದೇವಾಲಯವನ್ನು ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ. ಹಾಸನಾಂಬೆ ದೇವಿ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಬರುತ್ತಾರೆ. ಹಿಂದೂ ದಿನದರ್ಶಿಕೆ ಪ್ರಕಾರ, ಅಶ್ವಯುಜ ತಿಂಗಳಲ್ಲಿ ಹುಣ್ಣಿಮೆಯ ಬಳಿಕ ಮೊದಲ ಗುರುವಾರ ಈ ದೇವಾಸ್ಥಾನವನ್ನು ತೆರೆಯಲಾಗುತ್ತದೆ. ದೀಪಾವಳಿ ಹಬ್ಬದೊಂದಿಗೆ ಬಲಿಪಾಡ್ಯಮಿ ದಿನದವರೆಗೆ ತೆರೆಯಲಾಗುತ್ತದೆ. ಬಲಿಪಾಡ್ಯಮಿಯ ಮರುದಿನ ದಿನ ಹಾಸನಾಂಬೆ ದೇವಿಗೆ ಪೂಜೆ ನೆರವೇರಿಸಿದ ನಂತರ ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ.
ಇದನ್ನೂ ಓದಿ: ಮೈಸೂರು ದಸರಾ -2023: ಬ್ರಾಂಡಿಂಗ್ ಮೈಸೂರು ಸ್ಪರ್ಧೆ ಆಯೋಜನೆ