ಹಾಸನ: ನೆರೆಪರಿಹಾರದಲ್ಲಿ ಸುಮಾರು 19 ಕೋಟಿ ಬಂದಿದೆ. ಸರಿಯಾಗಿ ಹಣ ಹಂಚಿಕೆ ಆಗಿಲ್ಲ ಎಂದು ನೆರೆ ಪರಿಹಾರದ ವಿಷಯದಲ್ಲಿ ಶಾಸಕ ಶಿವಲಿಂಗೇಗೌಡ ಮತ್ತು ಶಾಸಕ ಪ್ರೀತಂಗೌಡ ನಡುವೆ ಏಕವಚನದಲ್ಲಿ ವಾಕ್ಸಮರ ನಡೆಸಿದರು.
ಹಾಸನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ಮಾತಿನ ಚಕಮಕಿ ನಡೆಸಿದ ಅವರು, ಅರಸೀಕೆರೆ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ ಅವರು ಇದೇನು ಜಿಲ್ಲೇನಾ..? ಎಲ್ಲವನ್ನು ಬೇಕಾದಹಾಗೆ ಬಳಸಿಕೊಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಂದು ಏನಿದೆ ಅದನ್ನು ನೀ ತಗೋ ನಂದು ಏನಿದೆ ಅದನ್ನು ತಗೋತಿನಿ. ನಿನ್ನ ಕ್ಷೇತ್ರದ್ದು ನಾ ಕೇಳುತ್ತಿದ್ದೇನಾ..? ಎಂದು ಶಿವಲಿಂಗೇಗೌಡ ಆಕ್ರೋಶಗೊಂಡರು. ಅವರ ಆರೋಪಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ಶಾಸಕ ಪ್ರೀತಂಗೌಡ ಈ ವೇಳೆ ಅನುದಾನ ನೀನು ತಂದಿದ್ದು ಎನ್ನಬೇಡ. ಸರ್ಕಾರ ಕೊಟ್ಟಿರೋದು ಎಂದಿದಕ್ಕೆ ನಾವೇನು ದನಕಾಯೋಕೆ ಬಂದಿಲ್ಲ ಎಂದು ಮತ್ತೆ ಶಿವಲಿಂಗೇಗೌಡ ಆಕ್ರೋಶಗೊಂಡರು.
ನಿಮ್ಮ ಸರ್ಕಾರ ಇದ್ದಾಗ ನೀವು ತಂದಿದ್ದು ಅಂತೀರಿ. ನಮ್ಮ ಸರ್ಕಾರ ಇದ್ದಾಗ ನಾನೇ ತಂದಿದ್ದೇನೆ ಅಂತೀವಿ. ಇದು ಯಡಿಯೂರಪ್ಪ ಅವರ ಸರ್ಕಾರ. ಆದರಿಂದ ಯಡಿಯೂರಪ್ಪ ಅವರೇ ಕೊಟ್ಟಿರೊ ಅನುದಾನ ಎಂದೇ ಹೇಳೋದು ಎಂದು ಶಾಸಕ ಪ್ರೀತಂ ಜೆ. ಗೌಡ ಸಮರ್ಥಿಸಿಕೊಂಡರು. ನನಗೂ ಟೇಬಲ್ ಕುಟ್ಟಿ ಮಾತನಾಡಲು ಬರುತ್ತೆ ಎಂದು ಶಾಸಕ ಪ್ರೀತಂಗೌಡ ಅರಸೀಕೆರೆ ಶಾಸಕರಿಗೆ ತಿರುಗೇಟು ನೀಡಿದರು.
ಬರಕ್ಕೆ ಹಣ ಬಂದ್ರೂ ನಿಮಗೇನೇ, ಮಳೆಗೆ ಅನುದಾನ ಬಂದ್ರು ನಿಮಗೇನೆ. ಹಾಗಿದ್ರೆ ನಾವ್ಯಾಕೆ ಇರೋದು ಎಂದು ಸಭೆಯಲ್ಲಿ ಆಕ್ರೋಶ ಭರಿತವಾಗಿ ಶಿವಲಿಂಗೇಗೌಡ ಕಿಡಿಕಾರಿದರು. ಇದಕ್ಕೆ ಶಾಸಕ ಪ್ರೀತಂ ಗೌಡ ಪ್ರತಿಕ್ರಿಯೆ ನೀಡಿ ಹೌದು ಗೌಡ್ರೆ ನೀವು ಹೇಳ್ತಿರೋದು ಸರಿ, ಯಾವುದಕ್ಕೆ ಅನುದಾನ ಬಂದ್ರೂ ರೇವಣ್ಣೋರು ತಗೊಂಡ್ ಹೋಗ್ತಿದ್ದರು. ಸಚಿವರೇ, ಶಿವಲಿಂಗೇಗೌಡರು ನೇರವಾಗಿ ರೇವಣ್ಣೋರಿಗೆ ಹೇಳೋಕ್ಕಾಗದೆ ನಮ್ಮೆದುರು ಹೇಳ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿಯವರೇ ನೀವು ರೇವಣ್ಣವರಿಗೆ ಹೇಳಿ. ಶಿವಲಿಂಗೇಗೌಡರು ನಿಮ್ಮ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಹಾಗೇ ಪ್ರೀತಂಗೌಡ ಕೂಡ ಶಿವಲಿಂಗೇಗೌಡರಿಗೆ ಧ್ವನಿಗೂಡಿಸಿದರು ಎಂದು ಹೇಳಿ ಎಂದು ಶಿವಲಿಂಗೇಗೌಡ ರ ಮಾತಿಗ ಪ್ರೀತಂ ಗೌಡ ತಿರುಗೇಟು ನೀಡಿದರು.