ಹಾಸನ: ನಾವು ರಾಜಕೀಯ ಬದ್ಧ ವೈರಿಗಳು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಕೋಮುವಾದಿಗಳನ್ನು ದೂರವಿಡಲು ಮೈತ್ರಿ ಸರ್ಕಾರ ರಚಿಸಿದ್ದೆವು ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತದೇ ಹಳೆಯ ಆರೋಪ ಮಾಡುತ್ತಿದ್ದಾರೆ. ಅವರ ಹೇಳಿಕೆಯಿಂದ ಮುಂದೆ ರಾಜಕೀಯ ಸಂಬಂಧ ಹೇಗಿರಲಿದೆ ಅನ್ನೋದು ಗೊತ್ತಾಗುತ್ತಿಲ್ಲ. ದೇವೇಗೌಡ್ರು ಮೈತ್ರಿ ಕಡಿದುಕೊಳ್ಳುವ ಬಗ್ಗೆ ಮಾತನಾಡಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರ ಮಾತುಗಳು ಅನುಮಾನ ಮೂಡಿಸಿವೆ ಎಂದರು.
ಇನ್ನು ಮುಂಬರುವ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದು, ನಾವು ಕೂಡ ಮೇಲೆ ಬಿದ್ದು ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಕಾಣುತ್ತಿಲ್ಲ. ಮೈತ್ರಿ ಮುರಿದುಕೊಳ್ಳುವ ಬಗ್ಗೆ ನಮ್ಮಲ್ಲಿ ಚರ್ಚೆಯಾಗಿಲ್ಲ. ನಾಯಕರ ಮಟ್ಟದಲ್ಲಿ ಮೈತ್ರಿಯಾಗಿದ್ದು ನಿಜ. ಕಾರ್ಯಕರ್ತರ ಸಲಹೆ ಕೇಳದೆ ಮೈತ್ರಿ ಮಾಡಿಕೊಂಡಿದ್ದು, ಇದು ಎರಡು ಪಕ್ಷಗಳ ಹಿನ್ನಡೆಗೆ ಕಾರಣವಾಗಿದ್ದು ಸತ್ಯ. ಮೈತ್ರಿ ಬಳಿಕ ಎರಡು ಪಕ್ಷಗಳ ನಾಯಕರು ಕಿತ್ತಾಟ ಮಾಡಬಾರದಿತ್ತು ಎನ್ನುವ ಮೂಲಕ ಜೆಡಿಎಸ್- ಕಾಂಗ್ರೆಸ್ ನಡುವಿನ ಸಂಬಂಧ ಹಳಸಿದೆ ಅಂತಾ ಪರೋಕ್ಷವಾಗಿ ಹೇಳಿದ್ರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಹಳೆ ಮೈಸೂರು ಭಾಗ ಕಡೆಗಣನೆ ಆಗಿದ್ದು, ಕೇವಲ 11 ಜಿಲ್ಲೆಗಳಿಗೆ ಮಾತ್ರ ಪ್ರಾತಿನಿಧ್ಯ ಸಿಕ್ಕಿದೆ. ನಮ್ಮ ಭಾಗದ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎನ್ನುವ ಮೂಲಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ರು.
ಅಷ್ಟೇ ಅಲ್ಲದೇ, ಹಿಂದಿನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಹೆಚ್. ವಿಶ್ವನಾಥ್ ಕೇವಲ ಒಂದು ವರ್ಷ ಅಧಿಕಾರದಲ್ಲಿದ್ದರು. ಆದ್ರೆ ಕಚೇರಿ ಕಡೆಗೆ ಬಂದಿದ್ದೇ ಕಡಿಮೆ. ನಾನು ರಾಜ್ಯಾಧ್ಯಕ್ಷನಾಗಿ ಸ್ವತಂತ್ರವಾಗಿಯೇ ಕೆಲಸ ಮಾಡುತ್ತಿದ್ದೇನೆ ಎನ್ನುವ ಮೂಲಕ ಹೆಚ್ ವಿಶ್ವನಾಥ್ಗೆ ಹೆಚ್ ಕೆ ಕುಮಾರಸ್ವಾಮಿ ಟಾಂಗ್ ನೀಡಿದ್ರು.