ಹಾಸನ: ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿ ನೆರೆ ಸಂತ್ರಸ್ತರನ್ನು ಮರೆತಿದೆ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಗಂಭೀರವಾದ ಆರೋಪ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದು ಸಮಾಜದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ತುಳಿಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಎಂಟರಿಂದ ಹತ್ತು ಜಿಲ್ಲೆಗೆ ನೆರೆ ಪ್ರವಾಹ ಬಂದಿದ್ದು ಇದುವರೆಗೂ ಕೂಡ ಒಂದು ಬಿಡಿಗಾಸನ್ನು ನೀಡಿಲ್ಲ. ನೆರೆ ಸಂತ್ರಸ್ತರು ಇಂದು ಕೂಡ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ರಾಜ್ಯದ ಜನರ ರೈತರ ಕಣ್ಣೀರನ್ನೋರಸದೇ ಬೆಳಗ್ಗೆ ಎದ್ದು ವರ್ಗಾವಣೆಯಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ ಅಂತ ವಾಕ್ಪ್ರಹಾರ ಮಾಡಿದರು.
ಇನ್ನೂ ಹಾಸನದಲ್ಲಿ ₹ 300 ರಿಂದ 400 ಕೋಟಿ ಪ್ರವಾಹದಿಂದ ಆಸ್ತಿಪಾಸ್ತಿ ಹಾನಿಗೊಳಗಾಗಿದ್ದು, ಇದುವರೆಗೂ ಕೂಡ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡಿಲ್ಲ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅಕ್ರಂಪಾಷ ಅವರ ಅವಧಿಯಲ್ಲಿ ₹ 10 ಸಾವಿರ ರೂಗಳನ್ನು ಕೊಟ್ಟಿದ್ದು ಅದಾದ ಬಳಿಕ ಉಳಿದವರಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಅಂತ ಆರೋಪಿಸಿದರು.
ಇನ್ನು ಜಿಲ್ಲಾ ಪಂಚಾಯತಿಗಳಿಗೆ ಬಂದಿದ್ದ ಸುಮಾರು ₹ 60 ಲಕ್ಷ ಪರಿಹಾರ ಹಣವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.