ಹಾಸನ : ಆನಂದ್ ಅಸ್ನೋಟಿಕರ್ ಮತ್ತು ಜಿ.ಟಿ. ದೇವೇಗೌಡರು ಪಕ್ಷ ಬಿಡುವ ಮಾತೇ ಇಲ್ಲ, ಅವರು ನಮ್ಮೊಂದಿಗಿರುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಹೇಳಿದ್ದಾರೆ.
ಜಿ.ಟಿ. ದೇವೇಗೌಡ ನಿನ್ನೆ ಕೂಡ ನನ್ನ ಜೊತೆ ಮಾತನಾಡಿದ್ದಾರೆ. ಅವರ ಬಗ್ಗೆ ಇಲ್ಲ ಸಲ್ಲದ ಊಹಾಪೋಹ ಬೇಡ. ಆನಂದ ಅಸ್ನೋಟಿಕರ್ ಕೂಡ ಪಕ್ಷ ಬಿಡುವುದಿಲ್ಲ. ಆದರೆ, ಮಧು ಬಂಗಾರಪ್ಪ ಚುನಾವಣೆಯಲ್ಲಿ ಸೋತ ಬಳಿಕ ಒಂದೂವರೆ ವರ್ಷದಿಂದ ಪಕ್ಷದ ಕಚೇರಿಗೆ ಬರುತ್ತಿಲ್ಲ. ಹೀಗಾಗಿ, ಪ್ರತಿ ಬಾರಿಯೂ ಪಕ್ಷದ ಕಚೇರಿಗೆ ಬನ್ನಿ ಎಂದು ಅವರ ಮನೆಗೆ ಹೋಗಿ ಕರೆಯುವುದಕ್ಕೆ ಆಗುವುದಿಲ್ಲ. ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಎಂಎಲ್ಎ ಮಾಡಲೇಬೇಕು ಎಂದು ಕುಮಾರಸ್ವಾಮಿ ಪಟ್ಟ ಕಷ್ಟ ಏನೆಂಬುದನ್ನು ಅವರು ಅರಿಯಬೇಕು ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಕೇವಲ ಜನ ಸಾಮಾನ್ಯರಿಗೆ ಮತ್ತು ರೈತಾಪಿ ವರ್ಗದವರಿಗೆ ಮಾತ್ರ ತಟ್ಟುತ್ತಿಲ್ಲ, ನಮ್ಮಂಥವರಿಗೂ ತಟ್ಟಿದೆ. ಈ ಬಗ್ಗೆ ನಾನು ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ, ಪ್ರತಿ ಜಿಲ್ಲೆಯಲ್ಲಿಯೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಸರ್ಕಾರ ರೈತರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಠಿಣ ಐಪಿಸಿ ಸೆಕ್ಷನ್ಗಳನ್ನು ಹಾಕುವ ಮೂಲಕ ಜೈಲಿಗೆ ಕಳುಹಿಸಿದೆ, ಇದು ಖಂಡನೀಯ ವಿಚಾರ. ನನ್ನ ಆಡಳಿತಾವಧಿಯಲ್ಲಿ, ದೇಶದ ರೈತರು ಶೇ 70ರಷ್ಟು ಟ್ರ್ಯಾಕ್ಟರ್ ಬಳಸುತ್ತಿದ್ದರು. ಅದರಲ್ಲಿ ಪಂಜಾಬ್ ರೈತರೇ ಅತಿ ಹೆಚ್ಚು ಟ್ರ್ಯಾಕ್ಟರ್ಗಳನ್ನು ಬಳಸುತ್ತಿದ್ದಾರೆ. ಇವತ್ತು ಶೇ 90ರಷ್ಟು ರೈತರು ಟ್ರ್ಯಾಕ್ಟರ್ ಬಳಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಒಂದಿಷ್ಟು ಜಮೀನು ಇಲ್ಲದೆ, ಉಳಲು ಎತ್ತುಗಳು ಇಲ್ಲದೆ ರೈತರು ಪರದಾಡುವ ಸ್ಥಿತಿ ಬಂದಿದೆ ಎಂದು ಹೇಳಿದರು.
ಓದಿ : ಬಿಎಸ್ವೈ ತಮ್ಮ ಬರ್ತಡೇ ಗಿಫ್ಟ್ ಕೊಡ್ತಾರೆ.. ಮೀಸಲಾತಿ ನಿರೀಕ್ಷೆಯಲ್ಲಿ ಮುಂದುವರೆದ 'ಪಂಚಮ ಧರಣಿ'
ಮಾರ್ಚ್ನಲ್ಲಿ ಜೆಡಿಎಸ್ ಪಕ್ಷದಿಂದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು. ಹೈದರಾಬಾದ್ ಕರ್ನಾಟಕದಲ್ಲಿಯೂ ನಮ್ಮ ಪಕ್ಷವನ್ನು ಮೇಲೆತ್ತುವ ಸಲುವಾಗಿ ಮುಂದಿನ ತಿಂಗಳು ವಿಜಯಪುರ ಮತ್ತು ಯಾದಗಿರಿಯಲ್ಲಿ ಪಕ್ಷದ ವತಿಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ದಕ್ಷಿಣ ಭಾಗದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ನಾಯಕರು ಪಕ್ಷ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಇಬ್ಬರು ಮೊಮ್ಮಕ್ಕಳನ್ನು ಕೊಂಡಾಡಿದರು.
ಮೈಸೂರು ಮೇಯರ್ ಚುನಾವಣೆ ಬಗ್ಗೆ ಮಾತನಾಡಿ, ನಮ್ಮಲ್ಲಿ ಹೆಚ್ಚು ಸ್ಥಾನ ಇದ್ದೂ, ಮೇಯರ್ ಸ್ಥಾನ ತಪ್ಪಬಾರದು ಎಂಬ ಕಾರಣಕ್ಕಾಗಿ ಹೋರಾಟ ನಡೆಸಿದೆವು. ಅದರಲ್ಲಿ ವಿಶೇಷತೆ ಏನೂ ಇಲ್ಲ. ಸುಖಾ ಸುಮ್ಮನೆ ವದಂತಿಗಳನ್ನು ಹಬ್ಬಿಸುವುದು ಬೇಡ ಎಂದರು.