ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಗೆ ನಿರ್ಧರಿಸಿದ್ದು, ಅರಸೀಕೆರೆ ಹಾಗೂ ಚನ್ನರಾಯಪಟ್ಟಣದಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖರೀದಿ ಕೇಂದ್ರಗಳು ಪ್ರಾರಂಭವಾಗಲಿದ್ದು, 15 ದಿನಗಳವರೆಗೆ ರೈತರು ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಮುಂದಿನ ಎರಡು ತಿಂಗಳು ಕೊಬ್ಬರಿ ಖರೀದಿಸಲಾಗುತ್ತದೆ. ಕಳೆದ ವರ್ಷ ಕ್ವಿಂಟಾಲ್‍ಗೆ 17,000 ರೂ.ನಂತೆ ಮಾರಾಟವಾಗಿದ್ದ ಕೊಬ್ಬರಿ ಈ ಬಾರಿ 10,000 ರೂ.ಗೆ ಇಳಿದು ರೈತರಿಗೆ ನಷ್ಟವುಂಟು ಮಾಡಿದೆ. ಹೀಗಾಗಿ ಸರ್ಕಾರವೇ ಬೆಂಬಲ ಬೆಲೆಯಡಿ ಖರೀದಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ನಾಶವಾಗಿದೆ ಎಂಬುದರ ಮಾಹಿತಿ ಪಡೆದು ಮುಖ್ಯಮಂತ್ರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು. ನಷ್ಟಕ್ಕೀಡಾಗಿರುವ ಬೆಳೆಗಾರರಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು. ಭೂಮಿಯಲ್ಲಿನ ಅಧಿಕ ತೇವಾಂಶದಿಂದ ಆಲೂಗಡ್ಡೆ ಭೂಮಿಯಲ್ಲೇ ಕೊಳೆಯುತ್ತಿದೆ ಎಂದು ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಹಾಸನ ತಾಲೂಕಿನ ಕೆಲ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 75,498 ಎಕರೆಯಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು, ಪ್ರತಿ ಎಕರೆಗೆ 5,000 ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಅನುದಾನ ಬಿಡುಗಡೆಯಾದ ತಕ್ಷಣ ಹಣ ವಿತರಿಸಲಾಗುವುದು. 700 ಹೆಕ್ಟೇರ್‌ನಲ್ಲಿ ತರಕಾರಿ, 358 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು ಬೆಳೆಯಲಾಗಿದ್ದು, ಕೊರೊನಾ ವಿಶೇಷ ಪ್ಯಾಕೇಜ್ ಅಡಿ ಪರಿಹಾರ ನೀಡಲಾಗುವುದು ಎಂದರು
ಜಿಲ್ಲೆಯಲ್ಲಿ 23,788 ಆಟೋ ಚಾಲಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದು, ಅವರಿಗೂ ಪರಿಹಾರ ದೊರೆಯಲಿದೆ. ಸವಿತಾ ಸಮಾಜದ 8,000 ಜನರಿಗೆ ತಲಾ 5,000 ರೂ. ಶೀಘ್ರದಲ್ಲೇ ದೊರೆಯಲಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ 32,483 ಕಾರ್ಮಿಕರಿಗೆ 16.24 ಕೋಟಿ ರೂ. ಬಿಡುಗಡೆಯಾಗಿದ್ದು, ಒಬ್ಬರಿಗೆ 2,000ರೂ. ನಂತೆ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಕೊರೊನಾ ಲಾಕ್‌ಡೌನ್ ಹಿನ್ನೆಲೆ ಬಡ ಕುಟುಂಬಗಳಿಗೆ ಪಡಿತರ ವಿತರಣೆಗೆ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಮೇ. 11ರಿಂದ ಇಲ್ಲಿವರೆಗೆ 2,55,352 ಪಡಿತರ ಕಾರ್ಡ್ದಾರರು 10 ಕೆ.ಜಿ. ಅಕ್ಕಿ, 2 ಕೆ.ಜಿ. ಕಾಳು ಹಾಗೂ 2 ಕೆ.ಜಿ. ಗೋಧಿ ಪಡೆದಿದ್ದಾರೆ. ಜಿಲ್ಲೆಯಲ್ಲಿ 4,86,801 ಪಡಿತರ ಕಾರ್ಡ್ದಾರರಿದ್ದು, ಈಗಾಗಲೇ ಶೇ. 50ರಷ್ಟು ಫಲಾನುಭವಿಗಳು ಪದಾರ್ಥ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಪಡಿತರ ವಿತರಣೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ಹೊಸ ಮಾನದಂಡ ರೂಪಿಸಿಲ್ಲ. ಕಳೆದ ಸರ್ಕಾರದಲ್ಲಿನ ಲೋಪಗಳನ್ನು ಸರಿಪಡಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು ಎಂದರು.