ಹಾಸನ : ಅಂತರ್ ಜಿಲ್ಲಾ ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅರಸೀಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ಸಮೀಪದ ಆರ್.ಎಸ್.ಪಾಳ್ಯ ಗ್ರಾಮದ ಮಹಮ್ಮದ್ ಗೌಸ್ (34) ಎಂಬಾತ ಬಂಧಿತ ಆರೋಪಿ.
500 ಗ್ರಾಂ ಚಿನ್ನ ಮತ್ತು 170 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 26 ಪ್ರಕರಣಗಳಲ್ಲಿ ಭಾಗಿಯಾಗಿರುವ ಮಹಮ್ಮದ್ ಗೌಸ್ 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ.
ಸೆಪ್ಟೆಂಬರ್ 1ರಂದು ಅರಸೀಕೆರೆ ತಾಲೂಕು ಚಿಕ್ಕೋಡಿ ಗ್ರಾಮದ ಮಹಾಲಕ್ಷ್ಮಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮನೆ ಮಾಲೀಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣವನ್ನು ಬೆನ್ನುಹತ್ತಿದ ಪೊಲೀಸರು ಮೊದಲಿಗೆ ಮುಬಾರಕ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣದ ಇಂಚಿಂಚು ಮಾಹಿತಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.
ಆತನ ಹೇಳಿಕೆಯ ಆಧಾರದ ಮೇಲೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯಾಗಿದ್ದ ಮೊಹಮ್ಮದ್ ಇಬ್ರಾಹಿಂ ಅಲಿಯಾಸ್ ಮಹಮ್ಮದ್ ಗೌಸ್ ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಮಾಡಿದ್ದ ಸರಣಿ ಕಳ್ಳತನದ ಪ್ರಕರಣ ಒಂದೊಂದಾಗಿ ಬಾಯಿಬಿಟ್ಟಿದ್ದಾನೆ.
ಹಾಸನ ಜಿಲ್ಲೆಯಲ್ಲಿ 12, ಚಿಕ್ಕಮಗಳೂರು 6, ತುಮಕೂರು 5, ಶಿವಮೊಗ್ಗ 3 ಸೇರಿ ಈತ 26 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನಿಂದ ₹20 ಲಕ್ಷಕ್ಕೂ ಅಧಿಕ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಅರಸೀಕೆರೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಈ ಕುರಿತು ಅರಸೀಕೆರೆ ತಾಲೂಕಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.