ಹಾಸನ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮೀಸಲಾತಿ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟೆಂಡರ್ ಹಾಕಲು ತಿಮ್ಮಪ್ಪ ಎಂಬ ಖಾಸಗಿ ವ್ಯಕ್ತಿಯ ಒಪ್ಪಿಗೆ ಜೊತೆಗೆ ಸರ್ಕಾರದ ಅಧಿಕಾರಿಗಳಿಗೆ ಶೇ12ರಷ್ಟು ಹಣ ಕೊಡಬೇಕು. ಸರ್ಕಾರದಲ್ಲಿ ಭ್ರಷ್ಟತೆ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸಿಪಿ ಹಣ ಲೂಟಿ ಆಗುವುದಷ್ಟೇ ಅಲ್ಲ, ಯಾರೋ ತಿಮ್ಮಪ್ಪ ಎಂಬ ಖಾಸಗಿ ವ್ಯಕ್ತಿಯ ಅನುಮತಿ ಪಡೆದು ಟೆಂಡರ್ ಹಾಕಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಎಸ್ಸಿಪಿ ಮತ್ತು ಟಿಎಸ್ಪಿ ಟೆಂಡರ್ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೇರಿದ ಅನುದಾನ ಲೂಟಿಯಾಗುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಿಎಂಗೆ ಪತ್ರ ಬರೆಯುತ್ತೇನೆ ಎಂದರು.
ಜನವರಿಯಲ್ಲಿ ಹೊಸ ಯೋಜನೆಯೊಂದಿಗೆ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ದೇವೇಗೌಡರು ಯಾವ ಕೆಲಸ ಹೇಳುತ್ತಾರೆ ಅದನ್ನು ಮಾಡುತ್ತೇವೆ. ಬಿಜೆಪಿ ಸರ್ಕಾರ ಬಂದ ನಂತರ ನಮ್ಮ ಪಕ್ಷದ ಯಾವ ಕೆಲಸವೂ ಆಗಿಲ್ಲ. ಎರಡು ವರ್ಷ ಆಗಲಿ, ನಂತರವೇ ಕೆಲಸ ಮಾಡುವುದು ನಮಗೆ ಗೊತ್ತಿದೆ. ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತೇವೆ. ಸಿಎಂ ಅವರ ಬಳಿ ಕಾಮಗಾರಿ ಬಗ್ಗೆ ಹೇಳೋಕೆ ಹೋಗಲ್ಲ. ನಮಗೆ ದೇವರು ಅಧಿಕಾರ ಕೊಟ್ಟಾಗ ಎಲ್ಲವನ್ನು ಮಾಡುತ್ತೇವೆ ಎಂದರು.
ಇನ್ನು ಸರ್ಕಾರ ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆ ಮಾಡಬೇಕು. ಮೀಸಲಾತಿ ಪ್ರಕಟಿಸದಿದ್ದರೆ ನಾಮಿನೇಟ್ ಮಾಡಲಿ. ಚುನಾವಣೆ ಬಂದು, ಮುಗಿಯುತ್ತಾ ಬಂದರೂ ಮೀಸಲಾತಿ ಪ್ರಕಟಿಸುವುದಿಲ್ಲ ಎಂದರೆ ಏನರ್ಥ?. ಇಲ್ಲವೇ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ನಾಮಿನೇಟ್ ಮಾಡಲಿ ಎಂದು ಅವರು ಆಗ್ರಹಿಸಿದರು.