ಹಾಸನ: "ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಅಂತಾ ಹೇಳುತ್ತಾರೆ ಅದು ತಪ್ಪಾ?. ಯತೀಂದ್ರ ಅವರು ತಂದೆ ಕ್ಷೇತ್ರದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅದಕ್ಕೆ ಫೋನ್ ಮಾಡುತ್ತಾರೆ" ಎಂದು ಶಾಸಕ ಹೆಚ್.ಡಿ ರೇವಣ್ಣ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರರ ಆಡಿಯೋ ವೈರಲ್ ಆಗಿರುವ ವಿಚಾರವಾಗಿ ಮಾತನಾಡಿ, "ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಕ್ಷೇತ್ರವನ್ನು ನಾನು ನೋಡಿಕೊಳ್ಳುತ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತನಾಡಿರುತ್ತಾರೆ. ಅದಕ್ಕೆಲ್ಲ ನಾನು ಕೆಳಮಟ್ಟಕ್ಕಿಳಿದು ಮಾತನಾಡುವುದಿಲ್ಲ" ಎಂದರು.
"14 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ನಾಮಕೇವಾಸ್ತೆ ಸಿಎಂ ಆಗಿದ್ದ ವೇಳೆ ಡಿ.ಕೆ. ಶಿವಕುಮಾರ್ ಬಲವಂತವಾಗಿ ಕಡತಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ನನಗೆ ಬೇಕಾದವರಿಗೆ ರಾಜೋತ್ಸವ ಪ್ರಶಸ್ತಿ ಕೊಡಲು ಆಗಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಕಚೇರಿ ಪೂರ್ತಿ ಡಿ.ಕೆ. ಶಿವಕುಮಾರ್ ನಿರ್ವಹಣೆ ಮಾಡುತ್ತಿದ್ದರು. ಸಿದ್ದರಾಮಯ್ಯ ಮನೆಯಲ್ಲಿ ಹೋದಾಗ ನನ್ನನ್ನು ಮತ್ತು ಡಿಕೆಶಿಯನ್ನು ಡಿಸಿಎಂ ಮಾಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದರು. ಮುಂಬೈಗೆ ಹೊಗಿದ್ದ, 5 ಮಂದಿ ಶಾಸಕರನ್ನು ವಾಪಸ್ ಕರೆದುಕೊಂಡು ಬರುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದು, ಈ ಬಗ್ಗೆ ಸಿದ್ದರಾಮಯ್ಯನವರೇ ಸಾಕ್ಷಿಯಾಗಿದ್ದರು" ಎಂದರು.
"ದೆಹಲಿ ನಾಯಕರು ಮಾತನಾಡುವಾಗ ಈ ವಿಚಾರ ಡಿ ಕೆ ಶಿವಕುಮಾರ್ ನನಗೆ ತಿಳಿಸಿದ್ದರು. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮುಂದೆಯೇ ತಿಳಿಸಿದ್ದರು. ರೇವಣ್ಣನವರಿಗೆ ಇಂಧನ ಖಾತೆ ಕೊಡಲು ನಿರಾಕರಣೆ ಮಾಡಿ ಡಿ.ಕೆ. ಶಿವಕುಮಾರಗೆ ನೀಡಿದ್ದರು. ನನಗೆ ನೀರಾವರಿ ಖಾತೆ ಬೇಡ ಎಂದು ಎಂ.ಬಿ. ಪಾಟೀಲ್ಗೆ ಬಿಟ್ಟುಕೊಟ್ಟೆ. ನನಗೆ ಇಂಧನ ಖಾತೆ ಕೂಡ ತಪ್ಪಿಸಿದ್ದು ಡಿ.ಕೆ. ಶಿವಕುಮಾರ್. ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿಲ್ಲ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಾದರೆ ನಮಗೆ ಯಾವುದೇ ಅಭ್ಯಂತರ ಇಲ್ಲ. ಆದರೇ ಮುಖ್ಯಮಂತ್ರಿಯಾಗಿ ಸಾರ್ವಜನಿಕರ ಕೆಲಸ ಮಾಡಲಿ" ಎಂದು ಹೇಳಿದರು.
"ಕೋಮುವಾದಿ ಜೊತೆ ಹೋಗದ ದೇವೇಗೌಡರನ್ನು ಕೇವಲ 10 ತಿಂಗಳಲ್ಲಿ ಕಾಂಗ್ರೆಸ್ ಪ್ರಧಾನಿ ಹುದ್ದೆಯಿಂದ ತೆಗೆದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮಾರಸ್ವಾಮಿ ಅವರಿಗೆ ನಿಮ್ಮ ಅಪ್ಪನನ್ನು ತೆಗೆದ ಕಾಂಗ್ರೆಸ್ ನಂಬಿ ಯಾಕೆ ಹೋಗುತ್ತಿರಾ?. ನೀವೇ 5 ವರ್ಷ ಸಿಎಂ ಆಗಿ ಅಂತ 2018ರಲ್ಲಿ ಹೇಳಿದ್ದರು. ಪ್ರಾದೇಶಿಕ ಪಕ್ಷ ಮುಗಿಸುವುದೇ ಕಾಂಗ್ರೆಸ್ ಕೆಲಸ. ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯಲು ಕಾಂಗ್ರೆಸ್ ಹೊಂಚುಹಾಕುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಿಂದ ಅಧಿಕಾರ ಹಿಡಿದಿದೆ. ಇದು ಜಾಸ್ತಿ ದಿನ ಇರಲ್ಲ. ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಎಳ್ಳು ನೀರು ಬಿಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಗಂಗಾ ನದಿಯಲ್ಲಿ ಮುಳುಗಿಸುತ್ತಾರೆ. ಹಾಗೇ ಸಂಹಾರ ಮಾಡಲು ತಾಯಿ ಚಾಮುಂಡೇಶ್ವರಿ ಕಾಯುತ್ತಿದ್ದಾಳೆ. ಸಮಯ ಬಂದಾಗ ಸಂಹಾರ ಮಾಡುತ್ತಾಳೆ" ಎಂದರು.
ಇದನ್ನೂ ಓದಿ: ಸುಳ್ಳುಗಳನ್ನ ತನಿಖೆ ಮಾಡಲು ಆಗುತ್ತದೆಯೇ: ಸಿಎಂ ಸಿದ್ದರಾಮಯ್ಯ ಪ್ರಶ್ನೆ