ಹಾಸನ: ಅರವಿಂದ ಲಿಂಬಾವಳಿ ಕೂಡ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು. ಮೊನ್ನೆ ಅವರನ್ನು ಥರ್ಡ್ ಕ್ಲಾಸ್ ಎಂದು ಬೈದವರು ಜಿಲ್ಲಾ ಉಸ್ತುವಾರಿಯಾಗಿದ್ದವರು. ಆದ್ರೆ ಇಂತಹ ದೊಡ್ಡ ಸ್ಥಾನ ಅನುಭವಿಸಿ ಮತ್ತೊಬ್ಬರನ್ನು ಏಕವಚನದಲ್ಲಿಯೇ ಇಂತಹ ಶಬ್ದಗಳಿಂದ ನಿಂದಿಸೋದು ಎಂದರೆ ಅವರ ವ್ಯಕ್ತಿತ್ವ ಏನೆಂಬುದನ್ನು ಎತ್ತಿ ತೋರಿಸುತ್ತದೆ ಎಂದು ಮಾಜಿ ಸಚಿವ ಎ.ಮಂಜು ಹೆಸರು ಪ್ರಸ್ತಾಪಿಸದೆ ಹೆಚ್.ಡಿ.ರೇವಣ್ಣ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಯುವ 2 ದಿನದ ಹಿಂದೆ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗುತ್ತದೆ ಎಂದು ಹೇಳಿಕೆ ನೀಡಿದ ಅರವಿಂದ ಲಿಂಬಾವಳಿಯನ್ನು ಥರ್ಡ್ ಕ್ಲಾಸ್ ಎಂಬ ಪದ ಬಳಸಿ ನಿಂದನೆ ಮಾಡಿರುವುದನ್ನು ವಾಪಸ್ ಪಡೆಯಬೇಕು. ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡುವುದರಲ್ಲಿ ರೇವಣ್ಣ ನಿಸ್ಸೀಮರು. ಅದೇ ರೀತಿ ಅಧಿಕಾರವನ್ನು ಅನುಭವಿಸಿದವರು. ನಾವೇನು ಕುಮಾರಸ್ವಾಮಿಯವರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದಿದ್ದೇವಾ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಹೋಗೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಹಿಂದೆ ಬಿಜೆಪಿಯೊಂದಿಗೆ ಸರ್ಕಾರ ಮಾಡಿ 20-20 ಮ್ಯಾಚ್ ಆಡಿ ಮಂತ್ರಿಯಾಗಿರಲಿಲ್ಲವಾ? ಈಗ ಯಾಕೆ ಬಿಜೆಪಿಯ ಬಗ್ಗೆ ಮಾತನಾಡ್ತಾರೆ. ಬಿಜೆಪಿಯ ಜೊತೆ ವಿಲೀನವಾದರೆ ರಾಜಕೀಯ ನಿವೃತ್ತಿ ಎನ್ನುವವರು ಬಿಜೆಪಿ ಸರ್ಕಾರದ ಅಧಿಕಾರಿಗಳ ಮನೆ ಮುಂದೆ ಕೈಕಟ್ಟಿ ನಿಲ್ತಾರೆ. ರಾಜಕೀಯದಲ್ಲಿ ಶತ್ರೂಗಳೂ ಇಲ್ಲ, ಮಿತ್ರರೂ ಇಲ್ಲ. ರೇವಣ್ಣ ನಾನು ಕೇವಲ ಹೊಳೆನರಸೀಪುರ ಶಾಸಕ ಎಂದು ತಿಳಿದುಕೊಂಡು ಬಿಟ್ಟಿದ್ದಾರೆ. ಆದ್ರೆ ಒಬ್ಬ ಶಾಸಕ ಎಂದ್ರೆ ರಾಜ್ಯದ ಸಮಸ್ಯೆಗಳನ್ನು ಎತ್ತಿ ಹಿಡಿದು, ಪ್ರಶ್ನೆ ಮಾಡುವ ಅಧಿಕಾರ ಹೊಂದಿರುತ್ತಾರೆ ಎಂದು ಅವರಿಗೆ ಗೊತ್ತಿಲ್ಲ. ಕೆಲವೊಮ್ಮೆ ಹತಾಶರಾಗಿ ಮಾತನಾಡ್ತಾರೆ ಎಂದರು.
ನಾನು ಮತ್ತೊಮ್ಮೆ ರೇವಣ್ಣ ಅವರಿಗೆ ಜ್ಞಾಪಕ ಮಾಡ್ತಿನಿ. ಹಿಂದೆ ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ಹೇಳಿದ್ರಲ್ಲ, ಇನ್ನೂ ಯಾಕೆ ನಿವೃತ್ತಿಯಾಗಿಲ್ಲ. ಮೋದಿಯವರು ಪ್ರಧಾನಿಯಾದ ತಕ್ಷಣ ಪಂಚೆ ಬಿಚ್ಚಿ ಅಪ್ಪ-ಮಕ್ಕಳು ಪ್ಯಾಂಟ್ ಹಾಕಿಕೊಂಡು ದೆಹಲಿಗೆ ಹೋಗಿ ಮೋದಿಯವರ ಬಳಿ ಕೈ ಕಟ್ಟಿ ನಿಂತುಕೊಂಡ್ರಲ್ಲ ನಾಚಿಕೆಯಾಗಲ್ವ?. ಇವತ್ತು ಜೆಡಿಎಸ್ ಪಕ್ಷಕ್ಕೆ ಮತ್ತು ಅವರುಗಳಿಗೆ ರಾಜ್ಯದಲ್ಲಿ ಗೌರವ ಸಿಕ್ಕಿದೆ ಎಂದ್ರೆ ಅದಕ್ಕೆ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಎಂದು ನೆನಪಿರಲಿ ಎಂದು ಗುಡುಗಿದರು.