ಹಾಸನ: ನಗರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಶಿವಲಿಂಗೇಗೌಡರ ಮೇಲೆ ಅಸಮಾಧಾನಗೊಂಡಿದ್ದ ಹೆಚ್.ಡಿ.ಕುಮಾರಸ್ವಾಮಿ, ಈಗ ಸ್ಥಳೀಯ ರಾಜಕಾರಣಕ್ಕೆ ನಾನ್ಯಾಕೆ ಮೂಗು ತೂರಿಸಲಿ? ಎನ್ನುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಜಲಧಾರೆ ಕಾರ್ಯಕ್ರಮಕ್ಕೆ ಶಿವಲಿಂಗೇಗೌಡ ಬಾರದಿದ್ದಕ್ಕೆ ನಾನು ಬೇಸರ ವ್ಯಕ್ತಪಡಿಸಿದ್ದೆ. ಆದರೆ ಅದಕ್ಕೆ ಸಾಕಷ್ಟು ಕಾರಣಗಳಿವೆ. ರೇವಣ್ಣನವರು ಮತ್ತು ಶಿವಲಿಂಗೇಗೌಡರ ಅವಿನಾಭಾವ ಸಂಬಂಧಕ್ಕೆ ಮಧ್ಯಬರುವುದಿಲ್ಲ. ಕೆಪಿಸಿಸಿ ಅಧ್ಯಕ್ಷರ ಜೊತೆ ಊಟಕ್ಕೆ ಹೋಗುತ್ತಾರೆ ಎಂದು ಹೇಳಿದ್ದೆ. ಅದೇ ರೀತಿ ನನ್ನ ಜೊತೆಯಲ್ಲಿ ಊಟಕ್ಕೆ ಬರಲಿ ಎಂಬ ಭಾವನೆಯಿಂದ ಹೇಳಿದೆ ಎನ್ನುವ ಮೂಲಕ ದೋಸೆ ತಿರುವಿದ ಹಾಗೆ ತಮ್ಮ ಮಾತನ್ನು ತಿರುವಿದರು.
ಇದನ್ನೂ ಓದಿ: ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಅನ್ನೋದ್ರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ : ಹೆಚ್ ಡಿ ಕುಮಾರಸ್ವಾಮಿ
ಶಾಲಾ ಮಕ್ಕಳ ಶಿಕ್ಷಣದಲ್ಲಿ ಹಿಂದುತ್ವದ ಬಗ್ಗೆ ಪಠ್ಯ ಅಳವಡಿಸುವುದರ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ಕೊಡಗಿನಲ್ಲಿ ಮಕ್ಕಳ ಕೈಯಲ್ಲಿ ಬಂದೂಕು ಕೊಟ್ಟು ಶಸ್ತ್ರಾಭ್ಯಾಸ ಮಾಡುತ್ತಿರುವುದನ್ನು ನೋಡಿದರೆ ದೇಶದ ಯುವ ಜನತೆ ಎತ್ತ ಸಾಗುತ್ತಿದೆ ಎಂಬುದನ್ನು ನಾವು ತಿಳಿಯಬೇಕಿದೆ ಎಂದರು.
ಇನ್ನು ಮರಿತಿಬ್ಬೇಗೌಡ ಮಾತಿಗೆ ನಾನು ಯಾವುದೇ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ನಾನು ಚಿಕ್ಕ ಮಗುವಿದ್ದಾಗಿನಿಂದಲೂ ಅವರು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಅವರು ಹಿರಿಯಣ್ಣನ ರೀತಿ. ಅವರು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಅವರು ನಮ್ಮೊಟ್ಟಿಗೆ ಇರುತ್ತಾರೆ. ಮುಂದೆ ಎಲ್ಲವೂ ಸರಿಯಾಗಿ ಅರಸಿಕೆರೆ ಶಾಸಕ ಶಿವಲಿಂಗೇಗೌಡ ಕೂಡ ನಮ್ಮ ಜೊತೆಯಲ್ಲೇ ಇರುತ್ತಾರೆ. ಅದನ್ನು ರೇವಣ್ಣ ನೋಡಿಕೊಳ್ಳುತ್ತಾರೆ ಎಂದು ಮಾತು ಮುಗಿಸಿದರು.