ಹಾಸನ: ಹಾಸನ ವಿಭಾಗ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗ ಸ್ಥಳಾಂತರ ಸೇರಿದಂತೆ 3 ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಜ. 20(ನಿನ್ನೆ) ರಿಂದ ಜ. 27 ರವರೆಗೆ ನಡೆಯಲಿದೆ ಎಂದು ಡಿಎಫ್ಒ ಬಸವರಾಜ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಕೆಲವು ಜೀವಗಳು ಬಲಿಯಾಗಿವೆ. ಈ ಹಿನ್ನೆಲೆ ಆನೆಗಳನ್ನು ಸ್ಥಳಾಂತರ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ವಿವಿಧ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಮಲೆನಾಡು ಭಾಗದ ಜನರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದನ್ನರಿತ ಅರಣ್ಯಾಧಿಕಾರಿಗಳು ಉಪಟಳ ನೀಡುತ್ತಿರುವ ಆನೆಗಳನ್ನು ಹಿಡಿಯಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಪತ್ರದ ಮೂಲಕ ಕೋರಿತ್ತು.
ಒಂದು ಪುಂಡಾನೆ ಸ್ಥಳಾಂತರ ಮತ್ತು 3 ಹೆಣ್ಣಾನೆಗಳನ್ನು ಹಿಡಿದು ಅವುಗಳಿಗೆ ಕಾಲರ್ ಐಡಿ ಅಳವಡಿಸಿ ಬಿಡಬೇಕೆಂಬ ನ್ಯಾಯಾಲಯದ ಆದೇಶದ ಹಿನ್ನೆಲೆ ನಿನ್ನೆಯಿಂದ ಆನೆ ಕಾರ್ಯಾಚರಣೆ ಪ್ರಾರಂಭವಾಗಿದೆ.
ಈ ಸುದ್ದಿಯನ್ನೂ ಓದಿ: ಹೆಚ್ಚಾದ ಕಾಡಾನೆ ಹಾವಳಿ... ಭಯದ ವಾತಾವರಣದಲ್ಲಿ ಹಾಸನ ಜನತೆ
ಈಗಾಗಲೇ ಮತ್ತಿಗೋಡು ಆನೆ ಕ್ಯಾಂಪ್‌ನಿಂದ ಅಭಿಮನ್ಯು ಸೇರಿದಂತೆ ಮೂರು ಅನೆಗಳು ಜಿಲ್ಲೆಗೆ ಬಂದಿದ್ದು, ನಾಳೆಯಿಂದ ಕಾರ್ಯಾಚರಣೆ ಮಾಡಲಿವೆ. ಅಲ್ಲದೇ ಇದಕ್ಕಾಗಿ 30 ಮಂದಿ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಅಲ್ಲಿನ ರೈತರು ಮತ್ತು ಸ್ಥಳೀಯರು ಕಾರ್ಯಾಚರಣೆಯ ಸಂದರ್ಭದಲ್ಲಿ ಸಹಕರಿಸಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.