ಹಾಸನ: ದಿನದಿಂದ ದಿನಕ್ಕೆ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗುತ್ತಿದ್ದು, ಜನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೆಲವು ಕಾಡಾನೆಗಳಿಗೆ ರೇಡಿಯೋ ಕಾಲರ್ ಹಾಕುವ ಸಾಹಸಕ್ಕೆ ಕೈ ಹಾಕಿದೆ.
2013-14ರಲ್ಲಿ ಆನೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ ರಾಜ್ಯ ಸರ್ಕಾರದ ನಿರ್ದೇಶನದಂತೆ ಸುಮಾರು 25 ಆನೆಗಳನ್ನು ಸೆರೆ ಹಿಡಿದು ಶಿವಮೊಗ್ಗ, ಕೊಡಗು ಹಾಗೂ ಚಾಮರಾಜನಗರದ ಆನೆ ಶಿಬಿರಗಳಿಗೆ ಕಳಿಸಲಾಗಿತ್ತು. ಇದಾದ ಬಳಿಕ ಮತ್ತೆ 2017ರಲ್ಲಿ ಎರಡು ಆನೆಗಳನ್ನು ಹಿಡಿದು ಸ್ಥಳಾಂತರಿಸಲಾಗಿತ್ತು. ಆದರೆ ಆನೆ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಸುಮಾರು 80ಕ್ಕೂ ಅಧಿಕ ಆನೆಗಳು ಇವೆ ಎಂಬುದು ಈ ಭಾಗದ ಶಾಸಕರು ಹಾಗೂ ಸ್ಥಳೀಯರ ಮಾತು.
ಈ ಹಿಂದೆ ಆನೆ ಉಪಟಳದಿಂದ ಬೇಸತ್ತ ಸಕಲೇಶಪುರ ತಾಲೂಕಿನ ಜನರು ಆನೆಗಳನ್ನು ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದು ಆಹೋರಾತ್ರಿ ಧರಣಿ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯಂತೆ ಆನೆಗಳ ಹಾವಳಿ ತಡೆಯಲು ರೈಲ್ವೆ ಗೇಟ್ ನಿರ್ಮಾಣ ಮಾಡುವುದಾಗಿ ನೀಡಿದ್ದ ಭರವಸೆಯಿಂದ ಪ್ರತಿಭಟನೆ ಹಿಂಪಡೆದಿದ್ದರು.
ನಂತರ ಮತ್ತೆ ರಾಜೇಂದ್ರಪುರ, ಕೆಂಚಮ್ಮನ ಹೊಸಕೋಟೆ, ಚನ್ನಳ್ಳಿ ಯಸಳೂರು ಭಾಗದಲ್ಲಿ ಮತ್ತೆ ಆನೆಗಳ ಹಾವಳಿ ಹೆಚ್ಚಾಗಿತ್ತು. ಒಂಟಿ ಸಲಗವೊಂದು ಮನೆಗೆ ನುಗ್ಗಿ ಮನೆಯಲ್ಲಿ ದವಸ ಧಾನ್ಯಗಳನ್ನು ನಾಶಪಡಿಸುವುದರ ಜೊತೆಗೆ ಗ್ರಾಮಗಳಿಗೆ ಬಂದು ರಾಜಾರೋಷವಾಗಿ ಓಡಾಡಿದ್ದರಿಂದ ಆ ಭಾಗದ ಜನರು ಭಯಭೀತರಾಗಿದ್ದರು. ಒಂಟಿ ಸಲಗವನ್ನು ಹಿಡಿಯಲೇಬೇಕು ಅಂತ ಮತ್ತೆ ಆಗ್ರಹಿಸಿದಾಗ ಅರಣ್ಯ ಅಧಿಕಾರಿಗಳು ಎರಡು ಆನೆಗಳನ್ನು ಹಿಡಿಯಲು ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಸೆರೆ ಹಿಡಿದು ಶಿವಮೊಗ್ಗ ಆನೆ ಶಿಬಿರಕ್ಕೆ ಕಳುಹಿಸಿದ್ದರು .
ಆನೆಗಳಿಗೆ ರೇಡಿಯೋ ಕಾಲರ್:
ಮತ್ತೆ ಆಹಾರ ಮತ್ತು ನೀರನ್ನು ಅರಸಿ ಆನೆಗಳು ಹಿಂಡು ಹಿಂಡಾಗಿ ನಾಡಿನತ್ತ ಆಗಮಿಸುತ್ತಿವೆ. ರಾತ್ರೋರಾತ್ರಿ ಕಾಡಿನಿಂದ ನಾಡಿಗೆ ಬರುವ ಆನೆಗಳ ಸಂಚಾರ ತಿಳಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಆನೆ ಸಂಚಾರವನ್ನು ತಿಳಿಯಲು ಆನೆಗಳಿಗೆ ರೇಡಿಯೋ ಕಾಲರ್ ಹಾಕಲು ಮುಂದಾಗಿದೆ.
ನಿನ್ನೆ ಕೂಡ ಸಕಲೇಶಪುರ ತಾಲೂಕಿನ ನನ್ನುಲಿ ಗ್ರಾಮದಲ್ಲಿ ಆನೆಯನ್ನು ಸೆರೆ ಹಿಡಿದು ಸುಮಾರು 45 ವರ್ಷದ ಆನೆಯೊಂದಕ್ಕೆ ಅರವಳಿಕೆ ತಜ್ಞರು ರೇಡಿಯೋ ಕಾಲರ್ ಹಾಕಿದ್ದಾರೆ. ಹಾಲೇ ಬೇಲೂರು ಗ್ರಾಮದ ಸಮೀಪದಲ್ಲಿ ಮತ್ತೊಂದು ಹೆಣ್ಣು ಆನೆಗೆ ರೇಡಿಯೋ ಕಾಲರ್ ಹಾಕಿದ್ದಾರೆ. ರೇಡಿಯೋ ಕಾಲರ್ ಹಾಕುವುದರಿಂದ ಆನೆಗಳ ಸಂಚಾರ ಎಲ್ಲೆಲ್ಲಿ ಎಂಬುದು ಸ್ಪಷ್ಟವಾಗಿ ಅರಣ್ಯಾಧಿಕಾರಿಗಳಿಗೆ ದೊರೆಯುತ್ತದೆ.ಮಾಹಿತಿ ಆಧಾರದ ಮೇಲೆ ಮಾನವ ಮತ್ತು ಪ್ರಾಣಿಗಳ ಸಂಘರ್ಷವನ್ನು ತಡೆಯಲು ರೇಡಿಯೋ ಕಾಲರ್ ಅರಣ್ಯ ಇಲಾಖೆಗೆ ಸಹಕಾರಿಯಾಗಲಿದೆ.