ಹಾಸನ: ಆಧುನಿಕತೆಗೆ ಸಿಲುಕಿ ಜನಪದ ಸಂಸ್ಕೃತಿ ನಶಿಸಲು ಅವಕಾಶ ನೀಡಬಾರದು ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ನಗರದ ರಾಮನಾಥಪುರದ ವೆಂಕಟೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಿರಿಜನ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನೇ ಕಳೆದುಕೊಂಡಂತೆ. ಜನಪದ ಸೊಗಡಿನಲ್ಲೇ ಭಾರತೀಯ ಮೂಲ ಸಂಸ್ಕೃತಿ, ಪರಂಪರೆಯ ಸತ್ವ ಅಡಗಿದೆ. ಹಾಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಇಂತಹ ಮಾತೃ ಸಂಸ್ಕೃತಿ ಅಳಿಯಲು ಅವಕಾಶ ನೀಡದೇ ಎಲ್ಲರು ಉಳಿಸಿ ಪೋಷಿಸಬೇಕಿದೆ ಎಂದರು.
ಇದಕ್ಕೂ ಮುನ್ನ ಕಾವೇರಿ ನದಿ ದಂಡೆ ಮೇಲಿರುವ ಶ್ರೀ ರಾಮೇಶ್ವರದೇವಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಮಹರ್ಷಿ ಭಾವಚಿತ್ರದೊಂದಿಗೆ ಶ್ರೀ ಸಂಜಯಕುಮಾರಾನಂದ ಸ್ವಾಮೀಜಿ ಅವರನ್ನು ಹೊತ್ತ ಭವ್ಯ ಬೆಳ್ಳಿ ರಥವು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿತು.