ಹಾಸನ: ನಗರದ ಹೊಸ ಬಸ್ ನಿಲ್ದಾಣದ ಸಮೀಪ ರೈಲ್ವೆ ಮೇಲ್ಸೇತುವೆ ಕುಸಿದಿದ್ದ ಸ್ಥಳಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಘಟನೆಯ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಕಾಸ್ಟಿಂಗ್ ಮಾಡದೆ ಬೋಲ್ಟ್ ಹಾಕಿ ಸ್ಲಾಬ್ ಕೂರಿಸಲಾಗಿತ್ತು, ಬಾರ್ ಬೆಂಡಿಂಗ್ ಮಾಡುವ ಕಾರ್ಮಿಕರು ಅದನ್ನು ಅರಿಯದೆ ಮೇಸ್ತ್ರಿ ಸೂಚನೆ ಪಾಲಿಸಿ ಬೋಲ್ಟ್ ಕತ್ತರಿಸಿದ್ದರಿಂದ ಸ್ಲಾಬ್ ಕೆಳಗೆ ಬಿದ್ದು ತುಂಡಾಗಿದೆ. ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ವಿನ್ಯಾಸ ಮತ್ತು ಕಚ್ಚಾವಸ್ತು ಬಳಕೆಯಲ್ಲಿ ಯಾವುದೆ ದೋಷವಿಲ್ಲ. ಇದು ಮಾನವ ಪ್ರಮಾದ ಎಂದು ವರದಿ ನೀಡಿದ್ದಾರೆ. ಆದರೂ ವಿನ್ಯಾಸ ನಕ್ಷೆಯೊಂದಿಗೆ ಸಂಪೂರ್ಣ ವರದಿ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ತಿಳಿಸಿದರು.
ಎನ್.ಆರ್.ವೃತ್ತದ ಕಡೆಯಿಂದ ಕಾಮಗಾರಿ ಚುರುಕುಗೊಳಿಸಲು ಸೂಚಿಸಲಾಗಿದೆ. ಭೂಮಿ ವಶಕ್ಕೆ ಪಡೆಯುವ ಸಮಸ್ಯೆ ಇತ್ತು. ಒಂದು ಭಾಗದಲ್ಲಿ ಸಂತಫಿಲೋಮಿನಾ ಶಾಲೆಯವರು ಜಾಗ ಬಿಡಲು ಒಪ್ಪಿದ್ದಾರೆ. ಸ್ಲ್ಯಾಬ್ ಮುರಿದು ಬಿದ್ದಿರುವ ಕಾರಣ ನಿಗದಿಗಿಂತಲೂ ಕಾಮಗಾರಿ ಪೂರ್ಣಗೊಳ್ಳಲು ಒಂದು ತಿಂಗಳು ವಿಳಂಬವಾಗಲಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚಿಸಿದ್ದೇನೆ ಎಂದು ಹೇಳಿದರು.
ನಗರಸಭೆಯಲ್ಲಿ ಜೆಡಿಎಸ್ ಹದಿನೇಳು ಸದಸ್ಯರನ್ನು ಹೊಂದಿದ್ದು, ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ಪಕ್ಷೇತರರು ಹಾಗೂ ಕಾಂಗ್ರೆಸ್ ಸಹಕಾರ ಕೇಳಿದ್ದೇವೆ. ಬಿಜೆಪಿಯವರು ಆಪರೇಷನ್ ಕಮಲವನ್ನು ಬೇರೆ ಕಡೆ ಇಟ್ಟುಕೊಳ್ಳಲಿ. ಅದೆಲ್ಲಾ ಇಲ್ಲಿ ನಡೆಯುವುದಿಲ್ಲ. ಜಿಲ್ಲಾಧಿಕಾರಿ ಚುನಾವಣೆ ದಿನಾಂಕ ನಿಗದಿ ಮಾಡಿದ ನಂತರ ಅಧ್ಯಕ್ಷರು ಯಾರಾಗಬೇಕೆಂದು ಸದಸ್ಯರು ನಿರ್ಧರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋವಿಡ್-19 ಸೋಂಕು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು. ಕೊರೊನಾ ಸೋಂಕಿತರ ತಪಾಸಣೆಗೆ ಹೋಬಳಿ ಮಟ್ಟದಲ್ಲೂ ವಿಶೇಷ ನಿಗಾ ಘಟಕ ಸ್ಥಾಪಿಸಬೇಕು ಎಂದು ಹೇಳಿದರು.