ಹಾಸನ: ಕಳೆದ ರಾತ್ರಿಯಿಂದ ಹೇಮಾವತಿ ಜಲಾಶಯದ ಒಳಹರಿವು ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚಾಗಿರುವುದರಿಂದ ಇಂದು ಬೆಳಗ್ಗೆಯಿಂದ ಪಶ್ಚಿಮಘಟ್ಟ ಭಾಗದಿಂದ 1.30 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇನ್ನು ಇಂದು ಬೆಳಗ್ಗೆ 11 ಗಂಟೆಯ ವೇಳೆಗೆ ಜಲಾಶಯ ಭರ್ತಿಯಾಗಿದ್ದರಿಂದ ಅಧಿಕ ಪ್ರಮಾಣದ ನೀರನ್ನ ಹೊರಬಿಡಲಾಗಿದೆ. ಹೀಗಾಗಿ ರಾಮನಾಥಪುರವಷ್ಟೆಯಲ್ಲದೇ ಹೊಳೆನರಸೀಪುರ ಕೂಡಾ ಜಲಾವೃತವಾಗುವ ಸಾಧ್ಯತೆಯಿದೆ.
ಅಪಾಯದ ಹಂತ ತಲುಪಿದ ವಾಣಿವಿಲಾಸ ಸೇತುವೆ
ಹೇಮಾವತಿ ಜಲಾಶಯದಿಂದ 6 ಕ್ರಸ್ಟ್ ಗೇಟ್ ಮೂಲಕ ನದಿಗೆ 1.10 ಲಕ್ಷ ಕ್ಯೂಸೆಕ್ ನೀರನ್ನ ಹೊರಬಿಟ್ಟಿರುವುದರಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಹೊಳೆನರಸೀಪುರದಲ್ಲಿರುವ ಹಾಸನ-ಮೈಸೂರು ನಡುವಿನ ಸಂಪರ್ಕ ಸೇತುವೆ ಮುಳುಗಡೆ ಹಂತ ತಲುಪಿದೆ. ಯಾಸಿನ್ ನಗರದಲ್ಲಿ 30 ಮನೆಗಳಿಗೆ ನೀರು ನುಗಿದ್ದು, ಶಾದಿ ಮಹಲ್ ಕಲ್ಯಾಣ ಮಂಟಪದಲ್ಲಿ ಸುಮಾರು 15 ಅಡಿಗೂ ಹೆಚ್ಚು ನೀರು ನಿಂತು ಕಲ್ಯಾಣ ಮಂಟಪದಲ್ಲಿದ್ದ ಹಲವು ವಸ್ತುಗಳು ನೀರಿನಲ್ಲಿ ಮುಳುಗಿವೆ. ಇನ್ನು 1888ರಲ್ಲಿ ನಿರ್ಮಾಣವಾದ ವಾಣಿವಿಲಾಸ ಸೇತುವೆ ನೀರಿನ ರಭಸಕ್ಕೆ ತನ್ನ ಶಕ್ತಿ ಕಳೆದುಕೊಳ್ಳುತ್ತಿದ್ದು, ಅಪಾಯದ ಹಂತ ತಲುಪಿದೆ.
ಮುಳುಗಿದ ಬೋರ್ವೆಲ್, ಕೊಚ್ಚಿಹೋದ ಭತ್ತದ ನಾಟಿ
ಹೇಮಾವತಿಯಿಂದ ಹರಿಯುತ್ತಿರುವ ನೀರಿನ ಪ್ರವಾಹಕ್ಕೆ ಹೊಳೆನರಸೀಪುರ ಭಾಗದಲ್ಲಿ ಬೆಳೆಯಲಾಗಿದ್ದ ಭತ್ತದ ನಾಟಿ ಸಂಪೂರ್ಣ ಹಾಳಾಗಿದೆ. ನದಿ ಭರ್ತಿಯಾಗಿ ಹರಿಯುತ್ತಿರುವುದರಿಂದ ಹೊಲ ಗದ್ದೆಗಳಲ್ಲಿ ಇದ್ದ ಮೋಟಾರ್ ಪೈಪುಗಳು ನೀರಿನಲ್ಲಿ ಮುಳುಗಿವೆ. ಇದ್ರಿಂದ ರೈತರಿಗೆ ಲಕ್ಷಾಂತರ ರೂ. ಹಾನಿಯಾಗಿದೆ.
ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಪ್ರಜ್ವಲ್ ರೇವಣ್ಣ
ಇನ್ನು, ನೆರೆಪೀಡಿತ ಹಾಗೂ ಮನೆಗಳಿಗೆ ನೀರು ನುಗ್ಗಿದ್ದ ಬಡಾವಣೆಗಳಿಗೆ ಖುದ್ದು ಭೇಟಿ ನೀಡಿದ ಸಂಸದ ಪ್ರಜ್ವಲ್ ರೇವಣ್ಣ, ಈಗಾಗಲೇ 2 ಪರಿಹಾರ ಕೇಂದ್ರ ತೆರೆಯಲಾಗಿದೆ. ನಿಮಗೆ ಅಲ್ಲಿ ಇರಲು ಸಾಧ್ಯವಾಗದಿದ್ದರೆ ಮತ್ತೆ ಇನ್ನೊಂದು ಪರಿಹಾರ ಕೇಂದ್ರವನ್ನ ತೆರೆಯಲು ಸೂಚನೆ ನೀಡುತ್ತೇನೆ. ಆದ್ರೆ ನೀರಿನ ಸಮೀಪ ತಮ್ಮ ಮಕ್ಕಳನ್ನ ಬಿಡಬೇಡಿ. ನೀರಿನಿಂದ ಅನಾಹುತ ಸಂಭವಿಸುವ ಮುನ್ನ ದಯಮಾಡಿ ತಾವೆಲ್ಲರೂ ಪರಿಹಾರ ಕೇಂದ್ರಕ್ಕೆ ತೆರೆಳಿ ಎಂದು ಮನವಿ ಮಾಡಿದ್ರು.