ಹಾಸನ: ಭಾರಿ ಮಳೆಯಿಂದ ಜಿಲ್ಲೆಯ ಜೀವನಾಡಿ ಹೇಮಾವತಿ ನದಿ ಭರ್ತಿಯಾಗಿದೆ. ಈ ಮಳೆ ಸಕಲೇಶಪುರ ಮತ್ತು ಆಲೂರು ಭಾಗಗಳಲ್ಲಿ ಪ್ರವಾಹ ಸಹ ಸೃಷ್ಟಿಸಿತು. ಈಗ ವರುಣ ತನ್ನ ಆರ್ಭಟವನ್ನು ಕಡಿಮೆ ಮಾಡಿದ್ದರೂ ಕೂಡ ಆತ ಸೃಷ್ಟಿ ಮಾಡಿದ ಅವಾಂತರ ಮಾತ್ರ ಅಷ್ಟಿಷ್ಟಲ್ಲ.
ಸಕಲೇಶಪುರ ತಾಲೂಕಿನ ಮಲಗಳಲೆ, ವಾಟೆಪುರ ಸೇರಿದಂತೆ ಹತ್ತು ಹಲವು ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಇಲಾಖೆ ಸರಿಪಡಿಸುವ ಕೆಲಸ ಮಾಡುತ್ತಿದರೆಯಾದರೂ ಸಮಸ್ಯೆಗಳು ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.
ವಿದ್ಯುತ್ ಕಂಬ ಮುರಿದು ಬಿದ್ದಿರುವ ಹಿನ್ನೆಲೆ ಕಳೆದ 10 ದಿನಗಳಿಂದ ವಿದ್ಯುತ್ ಇಲ್ಲದೆ ಸಾಕಷ್ಟು ಗ್ರಾಮಗಳು ಕತ್ತಲೆಯಲ್ಲೇ ದಿನ ದೂಡುತ್ತಿವೆ. ಮೊಬೈಲ್ ಚಾರ್ಜ್, ಕುಡಿಯುವ ನೀರು, ಮೋಟಾರ್ ಆನ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಇವುಗಳನ್ನು ಪಡೆಯಲು ಪ್ರತಿದಿನ ಹತ್ತಾರು ಕಿ.ಮೀ ನಡೆಯಬೇಕು.
ಕೆಪಿಟಿಸಿಎಲ್ ಸಿಬ್ಬಂದಿ ಮುರಿದುಬಿದ್ದ ಕಂಬಗಳನ್ನು ಸರಿಪಡಿಸುತ್ತಿದ್ದಾರೆ. ಆದರೆ, ಮಳೆ ಮತ್ತು ಪ್ರವಾಹ ಸೃಷ್ಟಿಯಾಗಿದ್ದರಿಂದ ಎನಿಸಲಾರದಷ್ಟು ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಮತ್ತು ವಿದ್ಯುತ್ ಕಂಬಗಳು ಬಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪುನರ್ ವಸತಿ ಕಲ್ಪಿಸುವ ಭರವಸೆ ಸಹ ನೀಡಿದ್ದಾರೆ. ಆದರೆ, ಸಿಬ್ಬಂದಿ ಕೊರತೆಯಿಂದ ಸ್ವಲ್ಪಮಟ್ಟಿನ ತೊಂದರೆಯಾಗುತ್ತಿದೆ. ಆದರೆ, ಸಮಸ್ಯೆ ಹೆಚ್ಚಾಗುವ ಮುನ್ನ ಮತ್ತಷ್ಟು ಸಿಬ್ಬಂದಿ ಕರೆಸಿ ಈ ಭಾಗದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುತ್ತಾರೆ ಸ್ಥಳೀಯರು.