ಬೇಲೂರು (ಹಾಸನ): ತಾಲೂಕಿನ ವಸತಿ ನಿಲಯವೊಂದರಲ್ಲಿ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಐದು ಮಂದಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ಎಸ್ಪಿ ಹರಿರಾಮ ಶಂಕರ್ ಹೇಳಿದ್ದಾರೆ. ಬೇಲೂರು ತಾಲೂಕಿನ ವಸತಿ ನಿಲಯವೊಂದರಲ್ಲಿ ಪ್ರಾಂಶುಪಾಲ ಸೇರಿ ಐವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸ್ಥಳೀಯ ಶಾಸಕ ಲಿಂಗೇಶ್ ಮತ್ತು ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಆಗ ಮಕ್ಕಳಿಂದ ಮಾಹಿತಿ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸ್ ತನಿಖೆಯಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿರುವುದು ದೃಢಪಟ್ಟಿದೆ. ಲೈಂಗಿಕ ಕಿರುಕುಳ ದೃಢಪಟ್ಟ ಹಿನ್ನೆಲೆಯಲ್ಲಿ ವಸತಿ ನಿಲಯದ ಪ್ರಾಂಶುಪಾಲೆ, ವಾರ್ಡನ್ ಮತ್ತು ವಸತಿ ನಿಲಯದಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ ಹಾಗು ಇವರಿಗೆ ಸಹಾಯ ಮಾಡಿದ ವ್ಯಕ್ತಿ ಹಾಗೂ ಗಣಿತ ಶಿಕ್ಷಕ ಸೇರಿ ಐವರನ್ನು ಬಂಧಿಸಿ ಚೈಲ್ಡ್ ಪ್ರೊಟೆಕ್ಷನ್ ಆಕ್ಟ್ ಹಾಗೂ ಎಸ್ಸಿ ಎಸ್ಟಿ ಕಾಯ್ದೆ ಮತ್ತು ಪೋಕ್ಸೋ ಪ್ರಕರಣದಡಿ ದೂರು ದಾಖಲು ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ನಿಲಯದಲ್ಲಿ ಎಂಟು ಮಂದಿ ಅಪ್ರಾಪ್ತ ವಿದ್ಯಾರ್ಥಿನಿಯವರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. 10ನೇ ತರಗತಿಯ ಮೂರು ವಿದ್ಯಾರ್ಥಿನಿಯ ಮೇಲೆ ಹಾಗೂ ಏಳನೇ ತರಗತಿಯ ಐದು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದೆಲ್ಲದೇ 300 ವಿದ್ಯಾರ್ಥಿಗಳಿಗೆ ದಿನಕ್ಕೆ ಬೇಕಾಗುವ ದಿನಸಿ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡದೆ ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡ ಪ್ರಕರಣ ದಾಖಲು ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಸಂಸ್ಥೆಯಾಗಲಿ, ಮನೆ ಬಳಿಯೇ ಆಗಲಿ, ಯಾರೇ ಆಗಲಿ ಮಕ್ಕಳ ಮೇಲೆ ದೌರ್ಜನ್ಯ ಘಟನೆಗಳು ನಡೆದ ಕೂಡಲೇ ಪೊಲೀಸರನ್ನು ಸಂಪರ್ಕಿಸಿ. ಏಕೆಂದ್ರೆ ಮಕ್ಕಳಾಗಲಿ ಅಥವಾ ಸಾರ್ವಜನಿಕರಾಗಲಿ ಯಾವುದಾದ್ರೂ ಆಡಳಿತ ಮುಂದೆ ಈ ರೀತಿ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿಸಿದ್ರೆ ನಾವು ಕ್ರಮಕ್ಕೆ ಮುಂದಾಗುತ್ತೇವೆ. ಒಂದು ವೇಳೆ ನೀವು ತಿಳಿಸಲು ಎರಡ್ಮೂರು ದಿನ ಅಥವಾ ನಾಲ್ಕೈದು ದಿನ ತಡವಾಗಿದ್ರೆ ಆರೋಪಿಗಳು ಮಕ್ಕಳು ಮೇಲೆ ನಿರಂತರ ದೌರ್ಜನ್ಯ ಎಸಗುವ ಸಾಧ್ಯತೆ ಮತ್ತು ಅಷ್ಟೇ ಅಲ್ಲ ಅವರನ್ನು ಹೆದರಿಸಿ, ಬೆದರಿಸಿ ಹಲ್ಲೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರ ಗಮನಕ್ಕೆ ತರುವುದು ಸೂಕ್ತ. ನಮ್ಮ ಗಮನಕ್ಕೆ ಬಂದಾಕ್ಷಣವೇ ನಾವು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ಉದ್ಯೋಗದ ಆಸೆ ತೋರಿಸಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ; ಟೆಕ್ಕಿ ಅರೆಸ್ಟ್