ಹಾಸನ: ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿ ಮಾಡದಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ಬಿಜೆಪಿ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಜನ ವಿರೋಧಿಯ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ ಹಾಗೂ ಸೆ. 21 ರಿಂದ ವಿಧಾನಸಭೆ ಅಧಿವೇಶನದಲ್ಲಿ ಶಾಸನ ಸಭೆಯ ಅಂಗೀಕಾರ ಪಡೆಯುವುದಕ್ಕಾಗಿ ಅಜೆಂಡಾ ಪಟ್ಟಿಯಲ್ಲಿ ಇಟ್ಟಿದೆ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ , ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ , ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನ ಸಮೂಹಗಳ ಮೇಲೆ ಅತ್ಯಂತ ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲ ಸುಗ್ರೀವಾಜ್ಞೆಗಳಾಗಿವೆ ಆದ್ದರಿಂದ ಇದನ್ನು ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಅಂಗೀಕಾರಕ್ಕೆ ಚರ್ಚೆಗೆ ಬರುತ್ತಿರುವ ಈ ಮೇಲಿನ ಸುಗ್ರೀವಾಜ್ಞೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ಶಾಸನ ಆಗದಂತೆ ಕ್ರಮವಹಿಸಬೆಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.