ಹಾಸನ: ವೈಯಕ್ತಿಕ ಲಾಭಕ್ಕಾಗಿ ಕುಟುಂಬಸ್ಥರೇ ಕೊರೊನಾ ಸೋಂಕಿತೆಯ ಟ್ರಾವೆಲ್ ಹಿಸ್ಟರಿ ತಿರುಚಿದ ಆರೋಪ ಹಾಸನ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಮೇ. 24 ರಂದು ಮಹಿಳೆ ಮತ್ತು ಮತ್ತೊಬ್ಬ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಇಬ್ಬರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದು, ಅವರ ವಾಸಸ್ಥಳ, ಇಂದಿರಾ ನಗರ ಮತ್ತು ಉತ್ತರ ಬಡಾವಣೆಯ 2 ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆದ್ರೆ ಮಹಿಳೆಗೆ ಸೋಂಕು ಇದ್ದಿದ್ದು ಮೊದಲೇ ಖಾತ್ರಿಯಾಗಿದ್ದರೂ ವಿವಿಧ ಲಾಭಗಳಿಗಾಗಿ ಅದನ್ನು ಮುಚ್ಚಿಡಲಾಗಿತ್ತು ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ.
ಸೋಂಕು ಹೊಂದಿದ್ದ ಮಹಿಳೆ ಅದನ್ನು ಬಹಿರಂಗ ಪಡಿಸುವುದರಿಂದ ಎಲ್ಲಿ ತನ್ನ ಕುಟುಂಬವನ್ನು ಸರ್ಕಾರ ಗೃಹಬಂಧನದಲ್ಲಿರಿಸುತ್ತದೆಯೋ ಇದರಿಂದ ತಮ್ಮ ತಂದೆಯ ವ್ಯಾಪಾರಕ್ಕೆ, ಅಣ್ಣನ ವೈದ್ಯಕೀಯ ವೃತ್ತಿಗೆ ಮತ್ತು ಅತ್ತಿಗೆಯ ಖಾಸಗಿ ಕೆಲಸಕ್ಕೆ ಹೊಡೆತ ಬೀಳುತ್ತದೆಯೋ ಎನ್ನುವ ಕಾರಣಕ್ಕಾಗಿ ಮುಚ್ಚಿಟ್ಟಿದ್ದಳು ಎಂದು ಆರ್ಟಿಐ ಕಾರ್ಯಕರ್ತ ಹಾಗೂ ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ.
ಸದ್ಯ ಸೋಂಕಿತರ ಪ್ರಯಾಣ ವರದಿ ಜಿಲ್ಲಾಡಳಿತಕ್ಕೆ ಲಭಿಸಿದ್ದು, ಬೆಚ್ಚಿ ಬೀಳಿಸುವಂತಿದೆ. ಅಕ್ಷರಸ್ಥರ ಕುಟುಂಬವೇ ತಮ್ಮ ವೈಯಕ್ತಿಕ ಲಾಭಕ್ಕಾಗಿ ರೋಗಿಯ ಪ್ರಯಾಣದ ವರದಿಯನ್ನ ತಪ್ಪು ತಪ್ಪಾಗಿ ನೀಡಿದೆ. ಈಗಲಾದರೂ ಈ ಕುಟುಂಬವನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಿ ಈಕೆ ಓಡಾಡಿರುವಂತಹ ಪ್ರದೇಶವನ್ನು ಸೀಲ್ ಡೌನ್ ಮಾಡುವ ಮೂಲಕ ಹಾಸನ ಜನತೆಯನ್ನು ಕಾಪಾಡಬೇಕು ಎಂದು ವಕೀಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.