ಬೆಂಗಳೂರು: ರಾಜ್ಯ ಸರ್ಕಾರ ಸರಳ, ಸುಗಮ ಮತ್ತು ಉದ್ಯಮಸ್ನೇಹಿ ಉಪಕ್ರಮಗಳಿಗೆ ಬದ್ಧವಾಗಿದ್ದು, ಜನವರಿಯ ವೇಳೆಗೆ ಏಕಗವಾಕ್ಷಿ ಮಂಜೂರಾತಿ ವ್ಯವಸ್ಥೆಗೆ ಅಗತ್ಯವಿರುವ ತಂತ್ರಾಂಶವನ್ನು ಸಿದ್ಧಪಡಿಸಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳಿಗೆಲ್ಲ ಡಿಸೆಂಬರ್ ಹೊತ್ತಿಗೆ ಈ ತಂತ್ರಾಂಶದ ಭಾಗವಾಗುವಂತೆ ಗಡುವು ಕೊಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಇ-ಆಡಳಿತ ಇಲಾಖೆಯ ಮುಖ್ಯಸ್ಥ ಉಜ್ವಲ್ ಘೋಷ್, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾತನಾಡಿದ ಸಚಿವರು, ಹೂಡಿಕೆ ಯೋಜನೆಗಳಿಗೆ ಮಂಜೂರಾತಿ, ಕೈಗಾರಿಕಾ ನಿವೇಶನ, ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿಎ ನಿವೇಶನ ಇತ್ಯಾದಿಗಳ ಹಂಚಿಕೆ ಈಗಿರುವ ಸಂಕೀರ್ಣ ಮತ್ತು ಬಹುಹಂತಗಳ ಅನುಮತಿ ವಿಧಾನದಿಂದ ವಿಳಂಬವಾಗುತ್ತಿದೆ. ಇದಕ್ಕೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಇತಿಶ್ರೀ ಹಾಡಲಾಗುವುದು. ಇದಕ್ಕಾಗಿ ಮೈಕ್ರೋಸಾಫ್ಟ್ ಕಂಪನಿಯು ಸಾಫ್ಟ್‌ವೇರ್ ಸಿದ್ಧಪಡಿಸಿದೆ. ಇದರೊಂದಿಗೆ ಎಲ್ಲ ಇಲಾಖೆಗಳ ಜೋಡಣೆ ಬಾಕಿದ್ದು, ಅದನ್ನು ತ್ವರಿತವಾಗಿ ಮಾಡಬೇಕು. ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನದ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ಇನ್ನೊಂದು ಸಭೆ ನಡೆಸಲಿದ್ದಾರೆ ಎಂದರು.
ಕೈಗಾರಿಕಾ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆಯನ್ನು ತರಲಾಗುವುದು ಎಂದು ನಾವು ಮಾತು ಕೊಟ್ಟಿದ್ದೆವು. ಹೊಸ ತಂತ್ರಾಂಶವನ್ನು ಬಳಸುವುದು ಹೇಗೆಂಬ ಬಗ್ಗೆ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗೆ ಸಮರ್ಪಕ ತರಬೇತಿ ಕೊಡಲಾಗುವುದು. ಉದ್ಯಮಿಗಳು ಇನ್ನು ಮುಂದೆ ಹತ್ತಾರು ಇಲಾಖೆಗಳಿಗೆ ಎಡತಾಕುವ ಪ್ರಮೇಯವೇ ಇರುವುದಿಲ್ಲ ಎಂದು ಅವರು ವಿವರಿಸಿದರು.
ನೂತನ ಏಕಗವಾಕ್ಷಿ ವ್ಯವಸ್ಥೆ ಸಂಪೂರ್ಣ ಆನ್ಲೈನ್ ಆಗಿರಲಿದೆ. ಉದ್ಯಮಿಗಳು ತಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿದರೆ ಮಿಕ್ಕೆಲ್ಲ ವಿವರಗಳು ತಾವಾಗಿಯೇ ದೊರೆಯುತ್ತವೆ. ಇದು ಸುಲಲಿತ ಕೈಗಾರಿಕಾ ಸಂಸ್ಕೃತಿಯ ಭಾಗವಾಗಿದೆ. ಒಟ್ಟಿನಲ್ಲಿ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಡಿಸೆಂಬರಿನಲ್ಲೇ ಮುಗಿಯಲಿದ್ದು, ಜನವರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉದ್ಯಮಿಗಳು ಸಾವಿರಾರು ಕೋಟಿ ರೂ. ಹೂಡುತ್ತಿದ್ದಾರೆ. ನಾವು ಅವರಿಗೆ ಏಕಗವಾಕ್ಷಿ ಅನುಮತಿಯಂತಹ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದ ರಾಜ್ಯವು ಮತ್ತಷ್ಟು ಉದ್ಯಮಸ್ನೇಹಿ ಮತ್ತು ತಂತ್ರಜ್ಞಾನದ ಸಮರ್ಥ ಬಳಕೆಯ ತಾಣವಾಗಲಿದೆ ಎಂದು ಸಚಿವ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆದಷ್ಟು ಬೇಗ ಭಾರತಕ್ಕೆ ಕಾಲಿಡಲಿದೆ ರೆಡ್ಮಿ ನೋಟ್ 14 ಸೀರಿಸ್: ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?