ಸಕಲೇಶಪುರ/ಹಾಸನ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೆಂಪುಹಳ್ಳ ಬಳಿ ಒಂಟಿ ಸಲಗವೊಂದು ಕಾರಿನ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಆನೆ ದಾಳಿ ಮಾಡಲು ಮುಂದಾಗಿದ್ದ ದೃಶ್ಯಾವಳಿ ಕಾರಿನ ಮಾಲೀಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಂಪುಹೊಳೆ ರಕ್ಷಿತ ಅರಣ್ಯ ವ್ಯಾಪ್ತಿಯ ಅಡ್ಡಹೊಳೆ ಸಮೀಪ ಕಳೆದ 20 ದಿನಗಳಿಂದ ಕಾಡಾನೆ ರಸ್ತೆ ಬದಿಯಲ್ಲಿಯೇ ಓಡಾಡುತ್ತಿರುವುದರಿಂದ ಪ್ರಯಾಣಿಕರಲ್ಲಿ ಭೀತಿ ಉಂಟಾಗಿದೆ. ಎರಡು ವಾರಗಳ ಹಿಂದೆ ರಾಜಸ್ಥಾನದ ಲಾರಿ ಚಾಲಕನ ಮೇಲೆ ಆನೆ ದಾಳಿ ಮಾಡಿ ಕೊಂದಿತ್ತು. ಸದ್ಯ ಕಾರಿನ ಮೇಲೆ ಕಾಡಾನೆ ದಾಳಿ ಮಾಡಲು ಮುಂದಾಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಆನೆಯನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕೂಡಲೇ ಈ ವಿಚಾರದ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಪುಂಡಾನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತೇನೆ. ಇನ್ನು 15 ದಿನಗಳ ಹಿಂದೆ ನಡೆದ ಕಾಡಾನೆ ದಾಳಿಯಿಂದ ಮೃತಪಟ್ಟ ರಾಜಸ್ಥಾನ ಮೂಲದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕೂಡ ನಾನು ಆಗ್ರಹಿಸುತ್ತೇನೆ ಎಂದರು.
ಕಾಡಾನೆಗಳ ಓಡಿಸುವ ಕಾರ್ಯವನ್ನು ಅರಣ್ಯಾಧಿಕಾರಿಗಳು ಮಾಡುತ್ತಿಲ್ಲ. ಕಾಡಿನ ಪ್ರದೇಶಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಮೃತನ ಕುಟುಂಬಕ್ಕೆ ಪರಿಹಾರ ನೀಡಲೇಬೇಕು ಎಂದು ಆಗ್ರಹಿಸಿದರು.