ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಕೆಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಭೂಮಿ ಕಂಪನವಾದ ಹಿನ್ನೆಲೆ ಮನೆಗಳು ಬಿರುಕು ಬಿಟ್ಟಿದ್ದು ಗ್ರಾಮಸ್ಥರು ಮನೆಯಿಂದ ಹೊರಬಂದಿದ್ದಾರೆ. ಅಲ್ಲದೇ, ರಸ್ತೆಗಳು ಕೂಡ ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಇಂದು ಮುಂಜಾನೆ 4:30ರ ಸುಮಾರಿಗೆ ಭೂಮಿ ಕಂಪನವಾಗಿದ್ದು, 10 ಸೆಕೆಂಡ್ ಕಂಪಿಸಿದೆ. ರಸ್ತೆ ಹಾಗೂ ಮನೆಗಳು ಬಿರುಕುಬಿಟ್ಟಿದ್ದು, ಮಲಗಿದ್ದವರು ಹೊರಬಂದು ರಸ್ತೆಯಲ್ಲಿ ಮಕ್ಕಳೊಂದಿಗೆ ನಿಂತಿದ್ದಾರೆ. ಭೂಮಿ ಕಂಪಿಸಿದ ಹಿನ್ನೆಲೆ ಮನೆಯಲಿದ್ದ ಪಾತ್ರಗಳು ಹಾಗೂ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
ಬೆಟ್ಟ ಸಾತನಹಳ್ಳಿ, ಹಳ್ಳಿಮೈಸೂರು, ಕಲ್ಲಹಳ್ಳಿ, ದಾಳ ಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು, ಬೆಳವಾಡಿ, ಮಾಕವಳ್ಳಿ, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಚಿಟ್ಟನಹಳ್ಳಿ ಬಡಾವಣೆ , ನರಸಿಂಹನಾಯಕ ನಗರ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ತಾಲೂಕಿನಾದ್ಯಂತ ಭೂಮಿ ಕಂಪಿಸಿದ ಅನುಭವವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ. ಮೇಲ್ನೋಟಕ್ಕೆ ದೊಡ್ಡಕಾಡನೂರು ಹಾಗೂ ದಾಳ ಗೌಡನಹಳ್ಳಿ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದಲೇ ಭೂಕಂಪನವಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಲಗೇಜುಗಳ ಸಮೇತ ಮುಖ್ಯಮಂತ್ರಿಗಳ ಅಧಿಕೃತ ಬಂಗಲೆ ತೊರೆದ ಉದ್ಧವ್ ಠಾಕ್ರೆ!