ಹಾಸನ : ಕೆಲಸದ ಅವಧಿಯನ್ನು 6 ಗಂಟೆಗೆ ಇಳಿಸಿ, ಯುವ ಜನರಿಗೆ ಉದ್ಯೋಗ ನೀಡಿ ಮತ್ತು ರಾಜ್ಯದ ಅಭಿವೃದ್ಧಿಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ಡಿವೈಎಫ್ಐ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಸದಸ್ಯರು, ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಏರಿಸಿರುವುದು ಖಂಡನೀಯ, ಇದು 1948 ರ ಕಾರ್ಖಾನೆ ಕಾಯ್ದೆಯ ಕಲಂ 51 ಮತ್ತು 54 ಕ್ಕೆ ವಿರುದ್ದವಾದವು ಎಂದು ದೂರಿದರು.
ಕಾರ್ಮಿಕರ ವಿಶ್ರಾಂತಿ ಸಮಯವನ್ನು ಕಡಿತಗೊಳಿಸಿರುವುದು ಸರಿಯಾದ ಕ್ರಮವಲ್ಲ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಿ ಎಂದು ಆಗ್ರಹಿಸಿದ್ದರು.
ಜನಸಾಮಾನ್ಯರು ಹಾಗೂ ದುಡಿಯುವ ವರ್ಗ ದೇಶದಾದ್ಯಂತ ಕೊರೊನಾ ವಿರುದ್ದದ ಹೋರಾಟದಲ್ಲಿ ಸಂಕಷ್ಠದಲ್ಲಿದೆ. ಇಂಥಹ ಸಂದರ್ಭದಲ್ಲಿ ಸರ್ಕಾರ ಜಾಗತಿಕ ಕಾರ್ಮಿಕ ವರ್ಗದ 8 ಗಂಟೆಯ ಕೆಲಸದ ಹಕ್ಕನ್ನು ಗೌರವಿಸುವ ಬದಲು, ರಾಜ್ಯದ ಕಾರ್ಮಿಕರಿಂದ ಅದನ್ನು ಕಸಿದುಕೊಳ್ಳಲು ಹೊರಟಿರುವುದು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು.